ಬೆಂಗಳೂರು: ಮಾರ್ಚ್ 3 ರಿಂದ ಆರಂಭವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಮೊದಲ ದಿನ ಸರ್ಕಾರ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರಿಂದ ಭರ್ಜರಿ ಭಾಷಣವನ್ನು ಮಾಡಿಸಲಾಗಿತ್ತು. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡು ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಭಾಷಣ ಮಾಡಿದ್ದಾರೆ. ಆದರೆ, ಥಾವರ್‌ಚಂದ್ ಗೆಹಲೋಟ್ ಅವರಿಂದ ಸರ್ಕಾರ ಮಾಡಿಸಿದ ಭಾಷಣದಲ್ಲಿನ ಲೋಪದೋಷಗಳನ್ನು ಇದೀಗ ಬಿಜೆಪಿ ಪಟ್ಟಿ ಮಾಡಿದ್ದು, ಸದನ ಉದ್ದಕ್ಕೂ ಸರ್ಕಾರಕ್ಕೆ ಚಾಟಿ ಬೀಸಲು ಸಿದ್ಧತೆಯನ್ನು ನಡೆಸಿದೆ. ಹಾಗಾದರೆ, ರಾಜ್ಯಪಾಲರ ಭಾಷಣದ ಮೇಲಿನ ಲೋಪದೋಷಗಳಾದ್ರೂ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಮಾರ್ಚ್ 3 ರಂದು ಎರಡು ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸರ್ಕಾರ ಮಾಡಿರುವ ಸಾಧನೆಗಳನ್ನು ಹಾಡಿ ಹೊಗಳಿದ್ದಾರೆ. ಸರ್ಕಾರ ಗ್ಯಾರೆಂಟಿಗಳ ಹೆಸರಿನಲ್ಲಿ ಪಡೆಯುತ್ತಿರುವ ಜನಪ್ರಿಯತೆ ಬಗ್ಗೆಯೂ ರಾಜ್ಯಪಾಲರು ತಿಳಿಸಿದ್ದು, ಇದೀಗ ಸರ್ಕಾರಕ್ಕೆ ಟಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ.
ಇದಕ್ಕಾಗಿಯೇ ಪ್ರತ್ಯೇಕವಾಗಿ ಬಿಜೆಪಿ ಲೋಪದೋಷಗಳನ್ನು ಪತ್ತೆ ಹಚ್ಚಲು ತಂಡ ರಚಿಸಿದ್ದು, ಇದೀಗ ತಂಡದ ಸದಸ್ಯರು ಪಟ್ಟಿಯನ್ನು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್‌ಗೆ ತಲುಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಲೋಪದೋಷಗಳ ಪಟ್ಟಿಯಲ್ಲಿ ಇರುವ ಪ್ರಮುಖ ಅಂಶಗಳನ್ನು ಗಮನಿಸುವುದಾದರೆ,
- ಶಿಕ್ಷಣ ಕ್ಷೇತ್ರದಲ್ಲಿ 13 ಸಾವಿರಕ್ಕೂ ಹೆಚ್ಚು ಪದವೀಧರರಿಗೆ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಲಾಗಿದೆ.
- ರಾಜ್ಯದಲ್ಲಿ 2024-25 ರ ತ್ರೈಮಾಸಿಕದಲ್ಲಿ ರಾಜಸ್ವ ಸಂಗ್ರಹಣೆಯಲ್ಲಿ 1,81,908 ಕೋಟಿ ಗುರಿಮುಟ್ಟಿರುವುದು.
- ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸುಗ್ರೀವಾಜ್ಞೆ ಹೊರಡಿಸಿರುವುದು.
- ಮೀನುಗಾರಿಕೆಗೆ ದೋಣಿಗಳನ್ನು ನೀಡಲಾಗುತ್ತಿದೆ. ಈ ಮೂಲಕ ಮೀನುಗಾರರ ಬದುಕಿನ ಉತ್ತೇಜನ ನೀಡಲಾಗುತ್ತಿರುವುದು.
- ಕ್ವಿನ್ ಸಿಟಿ ಅಭಿವೃದ್ಧಿ ಪಡಿಸಲು 40 ಸಾವಿರ ಕೋಟಿ ಹೂಡಿಕೆ. ಇದರಿಂದ 80 ಸಾವಿರ ಉದ್ಯೋಗ ಸೃಷ್ಟಿ.
- ಗೃಹಜ್ಯೋತಿ ಯೋಜನೆಯಡಿಯಲ್ಲಿ 1.62 ಕೋಟಿ ಗ್ರಾಹಕರು ಸೌಲಭ್ಯ ಪಡೆಯುತ್ತಿದ್ದಾರೆ. ಜನವರಿ 2025 ರವರೆಗೆ ಸರ್ಕಾರ 17290 ಕೋಟಿ ವಿದ್ಯುತ್ ಕಂಪನಿಗಳಿಗೆ ಬಿಡುಗಡೆ ಮಾಡಿದೆ.
- 5 ಕೆ.ಜಿ. ಅಕ್ಕಿಯ ಬದಲಿಗೆ ಹಣ ನೀಡುತ್ತಿದ್ದ ಸರ್ಕಾರ, ಈಗ ಅಕ್ಕಿಯನ್ನೇ ನೀಡಲು ಮುಂದಾಗಿರುವುದು.
- ಹೆಚ್‌ಎಂಟಿ ಪೀಣ್ಯ ಪ್ಲಾಂಟೇಷನ್ 14,300 ಕೋಟಿ ರೂಪಾಯಿ ಮೌಲ್ಯದಲ್ಲಿ ಅರಣ್ಯ ಭೂಮಿ ಹಿಂಪಡೆದು ಶ್ವಾಸ ತಾಣವಾಗಿ ಉಳಿಸಲು ಕಾನೂನು ಪ್ರಕ್ರಿಯೆ ಮಾಡುವ ಯುವನಿಧಿ ಯೋಜನೆ ಅಡಿಯಲ್ಲಿ 2,23,883 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು, 1,65,014 ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಆಗುತ್ತಿದೆ.
- ಎಸ್ಸಿ, ಎಸ್ಟಿ ಅಭಿವೃದ್ಧಿಗಾಗಿ 2024-25 ರಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಲ್ಲಿ ಹಂಚಿಕೆ ಮಾಡಲಾಗಿದೆ.
- ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ಮೀಸಲು.
- ನಳ ಸಂಪರ್ಕ ಕಲ್ಪಿಸುವ ಯೋಜನೆ ಮುಂದುವರಿಕೆ.
- ಫೆರಿಫೆರಲ್ ರಿಂಗ್ ರಸ್ತೆ 27 ಸಾವಿರ ಕೋಟಿ ಹುಡ್ಕೋ ಸಂಸ್ಥೆಯಿಂದ ಸಾಲ.
- ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆ ಗೆ AI ತಂತ್ರಜ್ಞಾನ ಆಧರಿಸಿ ಡೇಟಾ ಕಲೆ ಹಾಕುವುದು.
- ಬೆಂಗಳೂರಿಗೆ 6 ಟಿಎಂಸಿ ನೀರು ಹೆಚ್ಚಿಗೆ ಮಾಡುತ್ತಿದ್ದು, ಅದಕ್ಕಾಗಿ 6939 ಕೋಟಿ ರೂಪಾಯಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.
ಹೀಗೆ ಸಾಲು ಸಾಲು ವಿಚಾರಗಳು ಸರ್ಕಾರ ರಾಜ್ಯಪಾಲರ ಬಾಯಿಯಲ್ಲಿ ಹೇಳಿಸಿದ್ದು ಇದ್ಯಾವುದು ಸತ್ಯವಲ್ಲ. ಸತ್ಯಕ್ಕೆ ದೂರವಾದ ಮಾತುಗಳೆಂದು ಬಿಜೆಪಿ ಪಟ್ಟಿಯನ್ನು ನಾಯಕರ ಕೈಯಲ್ಲಿಟ್ಟಿದೆ.