ಬೆಳಗಾವಿ: ಮುಡಾ ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ನಾಯಕರು ಮೈಸೂರು ಚಲೋ ನಡೆಸಿದ್ದಾರೆ. ಈ ವೇಳೆ ಅದೇ ಬಿಜೆಪಿ ಪಕ್ಷದ ಅತೃಪ್ತ ನಾಯಕರು ಬಳ್ಳಾರಿ ಪಾದಯಾತ್ರೆಗೆ ಸಿದ್ಧವಾಗಿದ್ದಾರೆ.
ರೆಸಾರ್ಟ್ನಲ್ಲಿ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ 10ಕ್ಕೂ ಹೆಚ್ಚು ಜನ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಈ ಸಭೆಯಲ್ಲಿದ್ದರು.
ಮೈಸೂರಿನ ಪಾದಯಾತ್ರೆ ಶನಿವಾರವಷ್ಟೇ ಅಂತ್ಯವಾಗಿದೆ. ಈಗ ಕೇಸರಿ ಪಾಳಯದ ರೆಬೆಲ್ ಟೀಂ ಬಳ್ಳಾರಿ ಯಾತ್ರೆಗೆ ಸಿದ್ಧವಾಗಿದೆ. ಹೀಗಾಗಿ ಬಿಜೆಪಿಯ ಆಂತರಿಕ ಕಲಹ ಬೀದಿಗೆ ಬಂದಂತಾಗಿದೆ. ಈ ಮೂಲಕ ಬಿ.ವೈ. ವಿಜಯೇಂದ್ರ ನಾಯಕತ್ವ ಒಪ್ಪದ ನಾಯಕರು ಹೊಸ ಸಮರಕ್ಕೆ ನಾಂದಿ ಹಾಡಿದ್ದಾರೆ. ಬೆಳಗಾವಿಯ ಹೊರವಲಯದಲ್ಲಿ 10ಕ್ಕೂ ಹೆಚ್ಚು ಅತೃಪ್ತ ಬಿಜೆಪಿಯ ನಾಯಕರು ಗೌಪ್ಯ ಸಭೆ ನಡೆಸಿದ್ದಾರೆ.
ಸೆಪ್ಟೆಂಬರ್ 17ರಿಂದ ರೆಬೆಲ್ ಮುಖಂಡರು ಬಳ್ಳಾರಿಗೆ ಪಾದಯಾತ್ರೆಗೆ ನಾಂದಿ ಹಾಡುವ ಸಾಧ್ಯತೆ ಇದೆ. ಈ ಮೂಲಕ ವಾಲ್ಮೀಕಿ ನಿಗಮ ಹಗರಣ, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆಗೆ ವಿರೋಧ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ. ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಳ್ಳಲು ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಮತ್ತೊಮ್ಮೆ ಸಭೆ ಸೇರಲು ನಾಯಕರು ತೀರ್ಮಾನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ದೂರ ಇಟ್ಟು ಈ ಪಾದಯಾತ್ರೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ? ಅಥವಾ ಎಲ್ಲರನ್ನೂ ಒಟ್ಟಿಗೆ ಸೇರಿಕೊಂಡು ಪಾದಯಾತ್ರೆ ಮಾಡುವಂತೆ ರೆಬೆಲ್ ನಾಯಕರಿಗೆ ಸಲಹೆ ನೀಡುತ್ತಾ? ಎಂಬುವುದನ್ನು ಕಾಯ್ದು ನೋಡಬೇಕಿದೆ.