ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿಯು ಇಂದಿನಿಂದ ಸರಣಿ ಪ್ರತಿಭಟನೆ ನಡೆಸಲು ಸಿದ್ಧವಾಗಿದೆ. ಇಂದು ಬಿಜೆಪಿಯಿಂದ ಎರಡು ಪ್ರತಿಭಟನೆಗಳು ನಡೆಯುತ್ತಿವೆ.
ಈ ತಿಂಗಳು ಪೂರ್ತಿ ರಸ್ತೆಗೆ ಇಳಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಇಂದು ನಡೆಯುವ ಪ್ರತಿಭಟನೆಗಳು ಯಾವುವು?
ಸದನದೊಳಗೆ ಅಶಿಸ್ತು ತೋರಿದ್ದಾರೆಂದು ಅಮಾನತುಗೊಂಡಿರುವ 18 ಬಿಜೆಪಿ ಶಾಸಕರ ಪರ ಪ್ರತಿಭಟನೆ ನಡೆಸಲಾಗುತ್ತಿದೆ. ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗ ಬೆಳಿಗ್ಗೆ 10ಕ್ಕೆ ಈ ಪ್ರತಿಭಟನೆ ನಡೆಯಲಿದೆ.
ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಲಿದೆ. ಇತ್ತೀಚಿಗೆ ನಡೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸ್ಪೀಕರ್ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದು, ಅದನ್ನು ಮರುಪರಿಶೀಲಿಸಬೇಕು.ಅವರ ಅಮಾನತು ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಖುದ್ದು ಸ್ಪೀಕರ್ ಯು.ಟಿ.ಖಾದರ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ಅವರು ಬರಲು ಸಾಧ್ಯವಾಗದೇ ಇದ್ದರೆ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬರಬೇಕು. ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿಜೆಪಿಯ ವಿಧಾನಸಭೆಯ ಶಾಸಕರುಗಳು, ವಿಧಾನಪರಿಷತ್‌ನ ಸದಸ್ಯರುಗಳು ಭಾಗಿಯಾಗಲಿದ್ದಾರೆ.
ಮತ್ತೊಂದು ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ನಡೆಯಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 11 ಘಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಬಿ.ವೈ.ವಿಜಯೇಂದ್ರರ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಅಹೋರಾತ್ರಿ ಧರಣಿಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯ ಬಿ. ಎಸ್.ಯಡಿಯೂರಪ್ಪ ಸಾಥ್ ನೀಡಲಿದ್ದಾರೆ. ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ವಿಪ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬಸ್ ದರ, ನಮ್ಮ ಮೆಟ್ರೋ ದರ, ನಿನ್ನೆ ತಡರಾತ್ರಿ ಏರಿಕೆ ಆಗಿರುವ ಡಿಸೇಲ್ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ ಸೇರಿದಂತೆ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಜನರ ಪರ ದನಿ ಎತ್ತಲು ಬಿಜೆಪಿ ಮುಂದಾಗಿದೆ.
ಈ ಮೂಲಕ ಜನತಾ ನ್ಯಾಯಾಲಯದ ಮುಂದೆ ಸರ್ಕಾರದ ದರ ಏರಿಕೆ ಕೊಂಡ್ಯೊಯ್ಯಲು ಬಿಜೆಪಿ ವೇದಿಕೆ ಸಿದ್ಧಪಡಿಸಿದೆ. ಏಪ್ರಿಲ್ 5 ರಂದು ಇದೇ ಪ್ರತಿಭಟನೆಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಆನಂತರ ಏಪ್ರಿಲ್ 7 ರಿಂದ ಜಿಲ್ಲಾವಾರು ತಂಡಗಳನ್ನು ರಚಿಸಿಕೊಂಡು ಪ್ರತಿಭಟನೆಗೆ ನಡೆಸಲು ನಿರ್ಧರಿಸಲಾಗಿದೆ.