ಬೆಂಗಳೂರು: ಬಿಜೆಪಿ ಯಾವತ್ತೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅದು ಆಪರೇಷನ್ ಮೂಲಕವೇ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಆಪರೇಷನ್ ಕಮಲಕ್ಕೆ ಈಗಲೂ ಯತ್ನಿಸುತ್ತಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ(Madhu Bangarappa) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ರಿಸೈನ್ ಮಾಡಿಸುವುದು, ಅವರನ್ನು ಗೆಲ್ಲಿಸಿಕೊಳ್ಳುವುದು ಬಿಜೆಪಿಯ ಕೆಲಸವಾಗಿ ಬಿಟ್ಟಿದೆ. ಇದಕ್ಕೆ ವಿಜಯೇಂದ್ರ ಸೂತ್ರಧಾರ. ಹಿಂದೆ ಮುಂಬೈಗೆ ಕರೆದುಕೊಂಡು ಹೋದವರೂ ಇವರೇ. ಈಗ ಹಳೆಯ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಇನ್ನೂ ಮೂರುವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲೇ ಇರುತ್ತದೆ ಎಂದಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಜಮೀರ್ ಅವರ ಹೇಳಿಕೆ ಸರಿಯಲ್ಲ. ಅದು ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು. ಯಾರೇ ಆಗಲಿ ಧರ್ಮ, ಜಾತಿ ಬಗ್ಗೆ ಮಾತನಾಡಬಾರದು. ನೋಡಿಕೊಂಡು ಮಾತನಾಡಬೇಕು. ಯಾರೇ ಆದರೂ ಸರಿ. ಜಾತಿ ವಿಷಯ ಮಾತಿನ ದಾಟಿಯಾಗಬಾರದು ಎಂದಿದ್ದಾರೆ.