ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿರುವಂತೆಯೇ ಇಂದು ಸದನದಲ್ಲಿ ವಿಚಿತ್ರ ಘಟನೆಯೊಂದು ಭಾರೀ ಸದ್ದು ಮಾಡಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರೊಬ್ಬರು ಲೋಕಸಭೆಯ ಕಲಾಪ ನಡೆಯುವ ಜಾಗದಲ್ಲೇ (ಸದನದೊಳಗೆ) ಇ-ಸಿಗರೇಟ್ ಸೇದಿದ್ದಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ಈ ವಿಚಾರ ತಂದ ಅನುರಾಗ್ ಠಾಕೂರ್, ಟಿಎಂಸಿ ಸಂಸದರ ಹೆಸರನ್ನು ಪ್ರಸ್ತಾಪಿಸದೆಯೇ ದೂರು ನೀಡಿದ್ದಾರೆ. “ದೇಶದಲ್ಲಿ ಇ-ಸಿಗರೇಟ್ ನಿಷೇಧಿಸಲಾಗಿದೆ ಎಂಬುದು ಈ ಸದನಕ್ಕೆ ತಿಳಿದಿದೆ. ಆದರೆ, ಸದನದೊಳಗೆ ಇ-ಸಿಗರೇಟ್ ಸೇದಲು ನೀವು (ಸ್ಪೀಕರ್) ಏನಾದರೂ ಅನುಮತಿ ನೀಡಿದ್ದೀರಾ ಎಂದು ನಾನು ಕೇಳಲು ಬಯಸುತ್ತೇನೆ. ಟಿಎಂಸಿ ಸಂಸದರೊಬ್ಬರು ಕಳೆದ ಕೆಲವು ದಿನಗಳಿಂದ ಲೋಕಸಭೆಯೊಳಗೆ ಇ-ಸಿಗರೇಟ್ ಸೇದುತ್ತಿದ್ದಾರೆ,” ಎಂದು ಠಾಕೂರ್ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಸ್ಪೀಕರ್ ಖಡಕ್ ಪ್ರತಿಕ್ರಿಯೆ:
ಅನುರಾಗ್ ಠಾಕೂರ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನ ನಿಯಮಗಳನ್ನು ಸ್ಪಷ್ಟಪಡಿಸಿದರಲ್ಲದೇ, “ಯಾವುದೇ ಸಂಸದರು ಸದನದೊಳಗೆ ಧೂಮಪಾನ ಮಾಡಲು ನಿಯಮಗಳಲ್ಲಿ ಅಥವಾ ಸಂಪ್ರದಾಯದಲ್ಲಿ ಅವಕಾಶವಿಲ್ಲ. ಅಂತಹ ಯಾವುದೇ ಘಟನೆ ನಿರ್ದಿಷ್ಟವಾಗಿ ನನ್ನ ಗಮನಕ್ಕೆ ಬಂದರೆ ಅಥವಾ ಸಾಕ್ಷ್ಯಗಳೊಂದಿಗೆ ಕಂಡುಬಂದರೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಸಿದರು.
ಕಾಯ್ದೆ ಏನು ಹೇಳುತ್ತದೆ?
ಭಾರತದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ (ನಿಷೇಧ) ಕಾಯಿದೆ- 2019ರ ಅಡಿಯಲ್ಲಿ ಇ-ಸಿಗರೇಟ್‌ಗಳ ಬಳಕೆಯ ಮೇಲೆ ಕಠಿಣ ನಿರ್ಬಂಧವಿದೆ. ಇವುಗಳನ್ನು ಉತ್ಪಾದಿಸುವುದು, ಮಾರಾಟ ಮಾಡುವುದು, ಆಮದು ಮಾಡಿಕೊಳ್ಳುವುದು, ರಫ್ತು ಮಾಡುವುದು ಮತ್ತು ಜಾಹೀರಾತು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದರೂ, ಕಾನೂನು ರೂಪಿಸುವ ಸಂಸತ್ತಿನಲ್ಲೇ ಇಂತಹ ಆರೋಪ ಕೇಳಿಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪ್ರಧಾನಿ ಕಚೇರಿಯಲ್ಲಿ ರಾಹುಲ್-ಮೋದಿ 88 ನಿಮಿಷ ಚರ್ಚೆ: ಆಗಿದ್ದೇನು?



















