ನವದೆಹಲಿ: ಇದೇ ಫೆಬ್ರವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭೆ(Assembly) ಚುನಾವಣೆಗೆ ಬಿಜೆಪಿ ಮಂಗಳವಾರ ಎರಡನೇ ಪ್ರಣಾಳಿಕೆಯನ್ನು ಘೋಷಿಸಿದೆ. ಪಕ್ಷವು ಅಧಿಕಾರಕ್ಕೇರಿದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ಒದಗಿಸುವುದಾಗಿ ಆಶ್ವಾಸನೆ ನೀಡಿದೆ.
ದೆಹಲಿಯಲ್ಲಿ ಸಂಕಲ್ಪ ಪತ್ರದ 2ನೇ ಭಾಗವನ್ನು ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ದೆಹಲಿ ವಿದ್ಯಾರ್ಥಿಗಳಿಗೆ ನಾವು ಒಂದು ಬಾರಿಗೆ 15 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡುತ್ತೇವೆ. ಜೊತೆಗೆ ಎರಡು ಬಾರಿಯ ಪ್ರಯಾಣ ಮತ್ತು ಅರ್ಜಿ ಶುಲ್ಕವನ್ನೂ ನಾವೇ ಭರಿಸುತ್ತೇವೆ ಎಂದು ಘೋಷಿಸಿದ್ದಾರೆ.
ಕಳೆದ ವಾರವಷ್ಟೇ ಬಿಜೆಪಿ ತನ್ನ ಪ್ರಣಾಳಿಕೆಯ ಮೊದಲ ಭಾಗವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಹಾಯಧನ, ಗರ್ಭವತಿಯರಿಗೆ 21 ಸಾವಿರ ರೂ. ಆರ್ಥಿಕ ನೆರವು, ಬಡ ಕುಟುಂಬಗಳಿಗೆ 500 ರೂ.ಗಳಿಗೆ ಅಡುಗೆ ಅನಿಲ ಸಿಲಿಂಡರ್ ಮತ್ತು ಹಿರಿಯ ನಾಗರಿಕರಿಗೆ 2,500 ರೂಪಾಯಿ ಪಿಂಚಣಿಯನ್ನು ಘೋಷಿಸಿತ್ತು.
ಇದಲ್ಲದೇ, ಆಮ್ ಆದ್ಮಿ ಪಕ್ಷದ ಸರ್ಕಾರ ಜಾರಿ ಮಾಡಿರುವ ಎಲ್ಲ ಕಲ್ಯಾಣ ಯೋಜನೆಗಳನ್ನೂ ಮುಂದುವರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಘೋಷಿಸಿದ್ದರು. ಮೊದಲ ಸಂಪುಟ ಸಭೆಯಲ್ಲೇ ದಿಲ್ಲಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡುತ್ತೇವೆ. ಹೋಳಿ ಮತ್ತು ದೀಪಾವಳಿ ಹಬ್ಬಗಳಿಗೆ ತಲಾ ಒಂದೊಂದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದೂ ನಡ್ಡಾ ತಿಳಿಸಿದ್ದರು.
ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.