ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ ಜನಜೀವನವನ್ನು ತತ್ತರಗೊಳಿಸಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನ 14–15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹೆಚ್‌ಎಎಲ್ ವ್ಯಾಪ್ತಿಯಲ್ಲಿ ನಿನ್ನೆ 13 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಇಳಿಕೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಶೀತದ ಅಲೆಗಳು ಉಂಟಾಗುವ ಸಾಧ್ಯತೆಯಿದ್ದು, ಉತ್ತರ ಕರ್ನಾಟಕದ 9 ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶೀತಗಾಳಿ ಬೀಸಲಿದೆ. ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಈ 9 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಕುಸಿತ ಕಂಡಿದೆ. ಇನ್ನೂ ತಾಪಮಾನ ಕುಸಿಯುವ ಸಾಧ್ಯತೆ ಇದೆ. ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಜನ ಜೀವನ ತತ್ತರಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಎರಡನೆಯ ಬಾರಿಗೆ ತಾಪಮಾನ ಕನಿಷ್ಠ ಮಟ್ಟ ತಲುಪಿದೆ. 2023ರಲ್ಲಿ ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಎರಡೂ ದಿನಗಳ ಕಾಲ ಶೀತಗಾಳಿ ಬೀಸಲಿದ್ದು ವಿಜಯಪುರದಲ್ಲಿ ತಾಪಮಾನ 6 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ವೀರಶೈವ ಸಂಪ್ರಾದಯಂತೆ ಇಂದು ಸಂಜೆ ಶಿವಶಂಕರಪ್ಪ ಅವರಿಗೆ ಅಂತಿಮ ನಮನ | ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ



















