ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಯಾಗಲಿ ಎಂದು ಕೇಂದ್ರ ಸರ್ಕಾರವು ಬಿಮಾ ಸಖಿ ಯೋಜನೆ ಜಾರಿಗೆ ತಂದಿದೆ. ಎಲ್ಐಸಿಯ ಉಪಕ್ರಮವಾಗಿರುವ ಇದರಲ್ಲಿ ಹೆಣ್ಣುಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಮೂರು ವರ್ಷಗಳ ತರಬೇತಿಯ ಅವಧಿಯಲ್ಲಿ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷ ವಯಸ್ಸಿನ ಮಿತಿ ಇದೆ. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಎಲ್ಐಸಿ ಏಜೆಂಟ್ ಆಗಲು ಅವಕಾಶ
ಮೂರು ವರ್ಷಗಳ ತರಬೇತಿಯ ಸಮಯದಲ್ಲಿ ಮಹಿಳೆಯರಿಗೆ ಸ್ಟೈಪೆಂಡ್ ಕೂಡ ಸಿಗುತ್ತದೆ. ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಮತ್ತು ವಿಮಾ ಜಾಗೃತಿಯನ್ನು ಹೆಚ್ಚಿಸಲು ಮೊದಲ 3 ವರ್ಷಗಳವರೆಗೆ ವಿಶೇಷ ತರಬೇತಿ ಮತ್ತು ಸ್ಟೈಪೆಂಡ್ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ನಂತರ, ಅವರು ಎಲ್ಐ ಸಿ ಏಜೆಂಟ್ ಗಳಾಗಿ ಕೆಲಸ ಮಾಡಬಹುದು. ಅಷ್ಟೇ ಅಲ್ಲ, ಬಿಎ ಪಾಸ್ ಆಗಿರುವ ಮಹಿಳೆಯರಿಗೆ ಅಭಿವೃದ್ಧಿ ಅಧಿಕಾರಿಗಳಾಗಲು ಅವಕಾಶ ಸಿಗುತ್ತದೆ.
ಸ್ಟೈಪೆಂಡ್ ಎಷ್ಟು?
ಬಿಮಾ ಸಖಿ ಯೋಜನೆಯ ಮೂಲಕ 25,000 ಮಹಿಳೆಯರನ್ನು ಬಿಮಾ ಸಖಿಯಾಗಿ ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಗೆ ಸೇರುವ ಮಹಿಳೆಯರಿಗೆ ತರಬೇತಿಯ ಮೊದಲ ವರ್ಷದಲ್ಲಿ ಮಾಸಿಕ 7,000 ರೂ., ಎರಡನೇ ವರ್ಷದಲ್ಲಿ 6,000 ರೂ. ಮತ್ತು ಮೂರನೇ ವರ್ಷಕ್ಕೆ 5,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಅಂದರೆ, ತರಬೇತಿ ಅವಧಿಯಲ್ಲಿಯೇ ಮಹಿಳೆಯರು ಒಟ್ಟು 2 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಸಂಪಾದಿಸಬಹುದು. ಬೋನಸ್ ಹಾಗೂ ಕಮಿಷನ್ ಕೂಡ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಐಸಿ ಅಧಿಕೃತ ವೆಬ್ಸೈಟ್ https://licindia.in/test2 ಗೆ ಭೇಟಿ ನೀಡಿ.
ನಂತರ ‘Click here for Bima Sakhi’ ಮೇಲೆ ಕ್ಲಿಕ್ ಮಾಡಿ.
ಹೊಸ ಪುಟದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ವಿಳಾಸ ಸೇರಿ ಸೇರಿ ಎಲ್ಲ ವಿವರ ಸಲ್ಲಿಸಿ.
ಯಾವುದೇ ಎಲ್ಐಸಿ ಏಜೆಂಟ್/ಅಭಿವೃದ್ಧಿ ಅಧಿಕಾರಿ/ನೌಕರ/ವೈದ್ಯಕೀಯ ಪರೀಕ್ಷಕರೊಂದಿಗೆ ಸಂಬಂಧ ಹೊಂದಿದ್ದರೆ ಅವರ ವಿವರಗಳನ್ನು ಕೂಡ ನಮೂದಿಸಿ.
ಇದಾದ ನಂತರ, ಕ್ಯಾಪ್ಟಾ ಕೋಡ್ ಅನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು Submit ಕ್ಲಿಕ್ ಮಾಡಿ.