ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಕೊಲೆ ಪ್ರಕರಣದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ನೀಡಿರುವ ಫೋಟೋ ವೈರಲ್ ಆಗಿದೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ ವೇಳೆ ಜಗ್ಗ ನಟಿಗೆ ಈ ಉಡುಗೊರೆಯನ್ನ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೊಲೆ ಆರೋಪಿಗೆ ಸಿನಿ ನಂಟಿರುವುದು ಗೊತ್ತಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನ ವಿಚಾರಣೆಗೂ ಒಳಪಡಿಸಿದ್ದರು. ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ತನಿಖಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ಎ1 ಜಗ್ಗದೀಶ್ ಸಹಚರರಾದ ಅನಿಲ್, ಅರುಣ್ ಹಾಗೂ ನವೀನ್ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಬಳಿಕ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


















