ಬೆಂಗಳೂರು : ಬಿಹಾರದಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ 40ಕ್ಕೂ ಅಧಿಕ ಪ್ರಕರಣಗಳ ಆರೋಪಿ ಹಾಗೂ ಆತನ ತಂದೆಯನ್ನು ನಗರದಲ್ಲಿ ಬಂಧಿಸಲಾಗಿದೆ. ಮಾಣಿಕ್ ಸಿಂಗ್ ಹಾಗೂ ಆತನ ತಂದೆ ಮನೋಜ್ ಸಿಂಗ್ ಬಂಧಿತ ಆರೋಪಿಗಳು. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ನೆಲೆಸಿದ್ದ ಅಪ್ಪ, ಮಗನನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರ ಸಹಾಯದಿಂದ ಬಿಹಾರದ ವಿಶೇಷ ಕಾರ್ಯಪಡೆ ಪೊಲೀಸರು ಬಂಧಿಸಿದ್ದಾರೆ.
ಮಾಣಿಕ್ ಸಿಂಗ್ ಮತ್ತು ಆತನ ತಂದೆ ಮನೋಜ್ ಸಿಂಗ್ ಇಬ್ಬರೂ ಬಿಹಾರ ರೌಡಿಶೀಟರ್‌ಗಳು. ಮಾಣಿಕ್ ಸಿಂಗ್ ವಿರುದ್ಧ 24ಕ್ಕೂ ಅಧಿಕ ಹತ್ಯೆ ಆರೋಪ ಸೇರಿದಂತೆ ಒಟ್ಟು 40ಕ್ಕಿಂತ ಅಧಿಕ ಪ್ರಕರಣಗಳಿವೆ. ಬಿಲ್ಡರ್ಸ್, ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಆರೋಪಿಗಳ ವಿರುದ್ಧ ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿವೆ. ಮಾಣಿಕ್‌ಗಾಗಿ ಕಳೆದ ಐದು ವರ್ಷಗಳಿಂದ ಬಿಹಾರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆರೋಪಿಯ ಬಂಧನಕ್ಕಾಗಿ ಬಿಹಾರ ಪೊಲೀಸರು ಪ್ರತ್ಯೇಕ ತಂಡಗಳಿಗೆ ₹3 ಲಕ್ಷ ಬಹುಮಾನ ಸಹ ಘೋಷಿಸಿದ್ದರು.
ಸದ್ಯ ಇಬ್ಬರನ್ನೂ ಬಿಹಾರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಕಳೆದ ಎರಡು ವರ್ಷಗಳಿಂದ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಇಬ್ಬರಿಗೂ ಆಶ್ರಯ ನೀಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನಿನ್ನೆ ಬಿಹಾರ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಇಲ್ಲಿ ನಮ್ಮ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ತಿಳಿಸಿ, ನಮ್ಮ ಸ್ಥಳೀಯ ಪೊಲೀಸರ ಸಹಾಯ ಪಡೆದು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರೂ ಬಿಹಾರದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಟ್ರಾನ್ಸಿಟ್ ವಾರೆಂಟ್ ಆಧಾರದ ಮೇಲೆ ಬಂಧಿಸಲಾಗಿದೆ. ಬಿಹಾರದಿಂದ ಮೊದಲ ಟೀಂನಲ್ಲಿ ಒಬ್ಬರೇ ಸಿಬ್ಬಂದಿ ಬಂದಿದ್ದರು. ಬಳಿಕ ಕೊಡಿಗೆಹಳ್ಳಿಯಲ್ಲಿ ನಮ್ಮ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಸೀಮಂತ್ ಕುಮಾರ್ ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕಾಮಗಾರಿ ವೇಳೆ ಕುಸಿದ ರಸ್ತೆ | ವಾಹನ ಸಂಚಾರ ಅಸ್ತವ್ಯಸ್ತ, ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್!


















