ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಿನ್ನೆಯಷ್ಟೇ ಬಿಜೆಪಿ ಪಕ್ಷ ಸೇರಿದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬಕ್ಸಾರ್‌ನಿಂದ ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರನ್ನು ಕಣಕ್ಕಿಳಿಸಲಾಗಿದೆ.
ಇಂದು ಬಿಡುಗಡೆಯಾದ ಪಟ್ಟಿಯ ಪ್ರಕಾರ, ರಾಮಚಂದ್ರ ಪ್ರಸಾದ್ ಅವರು ಹಯಾಘಾಟ್ ಕ್ಷೇತ್ರದಿಂದ, ಛೋಟಿ ಕುಮಾರಿ ಅವರು ಛಪ್ರಾದಿಂದ ಮತ್ತು ರಾಕೇಶ್ ಓಜಾ ಅವರು ಶಹಪುರದಿಂದ ಸ್ಪರ್ಧಿಸಲಿದ್ದಾರೆ. ಬೀರೇಂದ್ರ ಕುಮಾರ್ ಮತ್ತು ಮಹೇಶ್ ಪಾಸ್ವಾನ್ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರೋಸೆರಾ ಹಾಗೂ ಅಗಿಯಾನ್ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದು, ರಂಜನ್ ಕುಮಾರ್ ಮುಜಫರ್‌ಪುರದಿಂದ ಮತ್ತು ಸುಭಾಷ್ ಸಿಂಗ್ ಅವರು ಗೋಪಾಲ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.