ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಇಂದು ಬೆಳಗ್ಗೆ ಆರಂಭವಾಗಿದೆ. ರಾಜ್ಯದ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದ ಹಲವು ಸಚಿವರ ರಾಜಕೀಯ ಭವಿಷ್ಯವನ್ನು ಈ ಹಂತ ನಿರ್ಧರಿಸಲಿದೆ.
122 ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.31.4ರಷ್ಟು ಮತದಾನ ದಾಖಲಾಗಿದೆ. ವಿರೋಧ ಪಕ್ಷಗಳ ಮಹಾಘಟಬಂಧನದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳ ನಡುವೆಯೇ ಚುನಾವಣೆ ನಡೆಯುತ್ತಿದೆ. ಆದರೆ, ಮಹಾಘಟಬಂಧನದ ಉಪಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.
ಈ ಹಂತವು ಎನ್‌ಡಿಎ ಮೈತ್ರಿಕೂಟದ ಸಣ್ಣ ಪಕ್ಷಗಳಾದ ಜಿತನ್ ರಾಮ್ ಮಾಂಝಿ ಅವರ ‘ಹಿಂದೂಸ್ತಾನಿ ಅವಾಮ್ ಮೋರ್ಚಾ’ ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ‘ರಾಷ್ಟ್ರೀಯ ಲೋಕ್ ಮೋರ್ಚಾ’ಗೆ ಅಗ್ನಿ ಪರೀಕ್ಷೆಯಾಗಿದೆ. ಈ ಹಂತದಲ್ಲಿ ಎರಡೂ ಪಕ್ಷಗಳು ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಿವೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದ ಒಂಬತ್ತು ಸಚಿವರು ಈ ಹಂತದಲ್ಲಿ ಕಣದಲ್ಲಿದ್ದಾರೆ. ಅವರಲ್ಲಿ ಬಿಜೇಂದ್ರ ಪ್ರಸಾದ್ ಯಾದವ್ (ಸುಪೌಲ್), ಸುಮಿತ್ ಕುಮಾರ್ ಸಿಂಗ್ (ಚಕೈ), ಮೊಹಮ್ಮದ್ ಜಮಾ ಖಾನ್ (ಚೈನ್‌ಪುರ್), ಲೆಶಿ ಸಿಂಗ್ (ಧಾಮ್ದಹ), ಕೃಷ್ಣ ನಂದನ್ ಪಾಸ್ವಾನ್ (ಹರ್ಸಿದ್ಧಿ), ರೇಣು ದೇವಿ (ಬೇಟ್ಟಿಯಾ), ನೀರಜ್ ಕುಮಾರ್ ಬಬ್ಲು (ಛತ್ತಾಪುರ್), ನಿತೀಶ್ ಮಿಶ್ರಾ (ಝಂಝಾರ್‌ಪುರ್), ಪ್ರೇಮ್ ಕುಮಾರ್ (ಗಯಾ), ಶೀಲಾ ಮಂಡಲ್ (ಫುಲ್ಪಾರಾಸ್), ವಿಜಯ್ ಮಂಡಲ್ (ಸಿಕ್ತಿ) ಮತ್ತು ಜಯಂತ್ ರಾಜ್ ಕುಶ್ವಾಹ (ಅಮರಪುರ್) ಸೇರಿದ್ದಾರೆ.
ಇಂದು ಮತದಾನ ನಡೆಯುತ್ತಿರುವ ಜಿಲ್ಲೆಗಳಲ್ಲಿ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸೀತಾಮರ್ಹಿ, ಮಧುಬನಿ, ಸುಪೌಲ್, ಅರಾರಿಯಾ ಮತ್ತು ಕಿಶನ್‌ಗಂಜ್ ಸೇರಿವೆ. ಈ ಎಲ್ಲಾ ಜಿಲ್ಲೆಗಳು ನೇಪಾಳದೊಂದಿಗೆ ಗಡಿ ಹಂಚಿಕೊಂಡಿವೆ.
ಮತದಾನ ನಡೆಯುತ್ತಿರುವ ಹೆಚ್ಚಿನ ಜಿಲ್ಲೆಗಳು ಸೀಮಾಂಚಲ ಪ್ರದೇಶದಲ್ಲಿವೆ. ಇಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವುದರಿಂದ, ಈ ಹಂತವು ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷ ಮಹಾಘಟಬಂಧನ್‌ಗೆ ನಿರ್ಣಾಯಕವಾಗಿದೆ.
ಭಗಲ್‌ಪುರ ಜಿಲ್ಲೆಯ ಕಹಲ್‌ಗಾಂವ್ ವಿಧಾನಸಭಾ ಕ್ಷೇತ್ರವು ತೀವ್ರ ಕುತೂಹಲ ಕೆರಳಿಸಿದ್ದು, ಇಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಮಹಾಘಟಬಂಧನದ ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಸ್ನೇಹಪರ ಸ್ಪರ್ಧೆ ಇದೆ. ಆಡಳಿತಾರೂಢ ಜೆಡಿಯು ಕೂಡ ಕಣದಲ್ಲಿದೆ. ಇನ್ನು, ಬಿಜೆಪಿಯ ಹಾಲಿ ಶಾಸಕ ಪವನ್ ಕುಮಾರ್ ಯಾದವ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಕಣದಲ್ಲಿರುವ ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್, ಮಾಜಿ ಸ್ಪೀಕರ್ ಉದಯ್ ನಾರಾಯಣ ಚೌಧರಿ (ಆರ್‌ಜೆಡಿ), ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ಮತ್ತು ಸಿಪಿಐ-ಎಂಎಲ್ ಶಾಸಕಾಂಗ ಪಕ್ಷದ ನಾಯಕ ಮೆಹಬೂಬ್ ಆಲಂ ಸೇರಿದ್ದಾರೆ.
ಎರಡನೇ ಹಂತದ ಚುನಾವಣೆಗಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 65ಕ್ಕಿಂತ ಹೆಚ್ಚು ದಾಖಲೆಯ ಮತದಾನವಾಗಿತ್ತು. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ದೆಹಲಿ ಸ್ಫೋಟದ ಸಂಚುಕೋರರನ್ನು ಸುಮ್ಮನೆ ಬಿಡಲ್ಲ: ಭೂತಾನ್‌ನಿಂದಲೇ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ


















