ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ಟಿಕೆಟ್ ಸಿಗದ ಅಸಮಾಧಾನವೂ ಅಲ್ಲೊಂದು-ಇಲ್ಲೊಂದು ಕಡೆ ಹೊಗೆಯಾಡುತ್ತಿದೆ. ಇದರ ಮಧ್ಯೆಯೇ ಬಿಹಾರದ ಭಾಗಲ್ಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು, ಕೇಂದ್ರದ ಮಾಜಿ ಸಚಿವ ಅಶ್ವಿನಿ ಚೌಬೆ ಅವರ ಪುತ್ರ ಅರ್ಜಿತ್ ಶಾಶ್ವತ್ ಚೌಬೆ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಆದರೆ, ನಾಮಪತ್ರ ಸಲ್ಲಿಸಲು ಕೆಲವೇ ಕ್ಷಣಗಳು ಬಾಕಿಯಿರುವಂತೆಯೇ ಬಂದ ಒಂದು ಫೋನ್ ಕರೆ ಎಲ್ಲವನ್ನೂ ಬದಲಾಯಿಸಿ, ಅವರು ನಾಮಪತ್ರ ಸಲ್ಲಿಸದೆಯೇ ಹಿಂದಿರುಗಿದ್ದಾರೆ.
ಅರ್ಜಿತ್ ಚೌಬೆ ಅವರು ಹಾರಗಳನ್ನು ಹಾಕಿಸಿಕೊಂಡು ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಮೆರವಣಿಗೆಯೊಂದಿಗೆ ಆಗಮಿಸಿದ್ದರು. ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಅವರಿಗೆ ಒಂದು ಫೋನ್ ಕರೆ ಬಂದಿದೆ. ಪತ್ರಕರ್ತರು ಮತ್ತು ಬೆಂಬಲಿಗರ ಮುಂದೆಯೇ ಫೋನ್‌ನಲ್ಲಿ ಮಾತನಾಡಿದ ಅವರು, ನಂತರ ನಾಮಪತ್ರ ಸಲ್ಲಿಸದೆ ಅಲ್ಲಿಂದ ವಾಪಸಾಗಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯ ಬಗ್ಗೆ ನಂತರ ಮಾತನಾಡಿದ ಅರ್ಜಿತ್, “ನನ್ನ ತಂದೆ ಅಶ್ವಿನಿ ಚೌಬೆ ಅವರು ಕರೆ ಮಾಡಿ ಸ್ಪಷ್ಟ ಸೂಚನೆಗಳನ್ನು ನೀಡಿದರು. ‘ನೀನು ಬಿಜೆಪಿಯಲ್ಲಿದ್ದೀಯಾ, ಬಿಜೆಪಿಯಲ್ಲೇ ಇರುತ್ತೀಯಾ’ ಎಂದು ಹೇಳಿದರು. ಅವರ ಮಾತಿಗೆ ಗೌರವ ಕೊಟ್ಟು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ,” ಎಂದು ತಿಳಿಸಿದ್ದಾರೆ.
ಪಕ್ಷೇತರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದಾಗಿನಿಂದಲೂ ಬಿಜೆಪಿ ವರಿಷ್ಠರಿಂದ ನಿರಂತರ ಒತ್ತಡವಿತ್ತು. “ಇಂದು ನನ್ನ ತಂದೆ ಮತ್ತು ತಾಯಿ ಕೂಡ ಮಾತನಾಡಿದರು. ಇದು ಬಿಜೆಪಿ ವರಿಷ್ಠರ ಸೂಚನೆ. ನಾನು ಅವರ ಮಾತನ್ನು ಹೇಗೆ ಮೀರುವುದು? ಪಕ್ಷ ಮತ್ತು ದೇಶದ ವಿರುದ್ಧ ಬಂಡಾಯ ಏಳಲಾರೆ,” ಎಂದು ಅರ್ಜಿತ್ ಚೌಬೆ ಹೇಳಿದರು.
ಭಾಗಲ್ಪುರ ಕ್ಷೇತ್ರಕ್ಕೆ ಬಿಜೆಪಿಯು ಹಾಲಿ ಶಾಸಕ ರೋಹಿತ್ ಪಾಂಡೆ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿತ್ತು. 2020ರ ಚುನಾವಣೆಯಲ್ಲಿ ಪಾಂಡೆ ಅವರು ಕಾಂಗ್ರೆಸ್‌ನ ಅಜೀತ್ ಶರ್ಮಾ ವಿರುದ್ಧ ಕೇವಲ ಸಾವಿರ ಮತಗಳ ಅಂತರದಿಂದ ಸೋತಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅರ್ಜಿತ್, ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಈ ಕ್ಷೇತ್ರವನ್ನು ಅವರ ತಂದೆ ಅಶ್ವಿನಿ ಚೌಬೆ ಅವರು 1995 ರಿಂದ 2010 ರವರೆಗೆ ಪ್ರತಿನಿಧಿಸಿದ್ದರು. ಕಳೆದ ಮೂರು ಅವಧಿಗಳಿಂದ ಕಾಂಗ್ರೆಸ್‌ನ ಅಜೀತ್ ಶರ್ಮಾ ಇಲ್ಲಿ ಶಾಸಕರಾಗಿದ್ದಾರೆ.