ಪಟ್ನಾ: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹೊಸದಾಗಿ ಮೂರು ಇಲಾಖೆಗಳನ್ನು ರಚನೆ ಮಾಡಿದ್ದಾರೆ. ಈ ಪೈಕಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖವಾಗಿರುವ ನಾಗರಿಕ ವಿಮಾನಯಾನ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಡಿಸೆಂಬರ್ 9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಸುಧಾರಣೆಯ ಭಾಗವಾಗಿ ‘ಯುವಜನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ’, ‘ಉನ್ನತ ಶಿಕ್ಷಣ’ ಮತ್ತು ‘ನಾಗರಿಕ ವಿಮಾನಯಾನ’ ಎಂಬ ಮೂರು ಹೊಸ ಇಲಾಖೆಗಳ ರಚನೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಡಿಸೆಂಬರ್ 12 ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಮೂಲಕ ಈ ಇಲಾಖೆಗಳಿಗೆ ಸಚಿವರನ್ನು ಹಂಚಿಕೆ ಮಾಡಲಾಗಿದೆ.
ನೂತನ ಖಾತೆ ಹಂಚಿಕೆಯ ಅನ್ವಯ, ಹೊಸದಾಗಿ ರಚಿಸಲಾದ ‘ಯುವಜನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ’ಯ ಜವಾಬ್ದಾರಿಯನ್ನು ಸಂಜಯ್ ಸಿಂಗ್ ‘ಟೈಗರ್’ ಅವರಿಗೆ ವಹಿಸಲಾಗಿದೆ. ಇವರು ಈಗಾಗಲೇ ಕಾರ್ಮಿಕ ಸಂಪನ್ಮೂಲ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ. ಹಾಗೆಯೇ, ರಾಜ್ಯದ ಶಿಕ್ಷಣ ಸಚಿವರಾಗಿರುವ ಸುನಿಲ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ಹೊಸ ‘ಉನ್ನತ ಶಿಕ್ಷಣ ಇಲಾಖೆ’ಯ ಜವಾಬ್ದಾರಿಯನ್ನು ನೀಡಲಾಗಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ವಿಸ್ತರಣೆಯ ದೃಷ್ಟಿಯಿಂದ ನಾಗರಿಕ ವಿಮಾನಯಾನ ಇಲಾಖೆಯನ್ನು ಸ್ವತಃ ಮುಖ್ಯಮಂತ್ರಿಗಳೇ ನಿರ್ವಹಿಸಲಿದ್ದಾರೆ. ಇದೇ ವೇಳೆ ಇಲಾಖೆಗಳ ಮರುಸಂಘಟನೆಯ ಭಾಗವಾಗಿ ಪಶು ಮತ್ತು ಮೀನುಗಾರಿಕೆ, ಕಾರ್ಮಿಕ ಸಂಪನ್ಮೂಲ ಹಾಗೂ ಕಲೆ ಮತ್ತು ಸಂಸ್ಕೃತಿ ಇಲಾಖೆಗಳ ಹೆಸರುಗಳನ್ನು ಬದಲಾಯಿಸಿ ಅವುಗಳ ವ್ಯಾಪ್ತಿಯನ್ನು ಸ್ಪಷ್ಟಪಡಿಸಲಾಗಿದೆ.
ಬೃಹತ್ ಗುರಿ
ಮುಂದಿನ ಐದು ವರ್ಷಗಳಲ್ಲಿ ಅಂದರೆ 2025-30ರ ಅವಧಿಯಲ್ಲಿ ರಾಜ್ಯದ ಒಂದು ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಯುವಜನರಿಗೆ ಅಗತ್ಯವಾದ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು ಅನಿವಾರ್ಯವಾಗಿದ್ದು, ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಯನ್ನು ರಚಿಸಲಾಗಿದೆ. ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಗುಣಮಟ್ಟ, ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಲು ಶಿಕ್ಷಣ ಇಲಾಖೆಯಿಂದ ಪ್ರತ್ಯೇಕಿಸಿ ಉನ್ನತ ಶಿಕ್ಷಣ ಇಲಾಖೆಯನ್ನು ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಗರಿಕ ವಿಮಾನಯಾನ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಕುರಿತು ಸಮರ್ಥನೆ ನೀಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಈಗಾಗಲೇ ಹಲವು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಉಲ್ಲೇಖಿಸಿದ್ದಾರೆ. ಭವಿಷ್ಯದಲ್ಲಿ ಉಡಾನ್ ಯೋಜನೆಯಡಿ ಇನ್ನೂ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರತ್ಯೇಕ ಇಲಾಖೆಯ ರಚನೆಯಿಂದ ಕಾಮಗಾರಿಗಳಿಗೆ ವೇಗ ದೊರೆಯಲಿದೆ. ಇದು ರಾಜ್ಯದಲ್ಲಿ ಕೈಗಾರಿಕಾ ವಾತಾವರಣವನ್ನು ಸುಧಾರಿಸಲು ಮತ್ತು ಸ್ಥಳೀಯ ಉತ್ಪನ್ನಗಳ ರಫ್ತಿಗೆ ಸಹಕಾರಿಯಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ; ‘ಆಪರೇಷನ್ ಸಿಂಧೂರ್’ ತೀವ್ರತೆ ತಗ್ಗಿರಬಹುದು, ಆದರೆ ಮುಗಿದಿಲ್ಲ : ಸಿಡಿಎಸ್ ಅನಿಲ್ ಚೌಹಾಣ್ ಎಚ್ಚರಿಕೆ



















