ನವದೆಹಲಿ : ಭಾರತೀಯ ಚುನಾವಣಾ ಆಯೋಗವು ಇಂದು ಸಂಜೆ 4 ಗಂಟೆಗೆ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ. ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಿಂದ ಚುನಾವಣಾ ಆಯೋಗವು ಸುದ್ದಿಗೋಷ್ಠಿ ನಡೆಸಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22ರಂದು ಕೊನೆಗೊಳ್ಳುತ್ತದೆ. ಮುಂಬರುವ ಚುನಾವಣೆಯು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ನಡುವಿನ ನೇರ ಸ್ಪರ್ಧೆಯಾಗುವ ನಿರೀಕ್ಷೆಯಿದೆ.
ಇನ್ನು ಬಿಹಾರದಲ್ಲಿ ಸೆ.30ರಂದು ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪೂರ್ಣಗೊಳಿಸಿದ್ದು, ಎಸ್‌ಐಆರ್‌ನ ಕೊನೆಯ ಪಟ್ಟಿಯ ಪ್ರಕಾರ, 47 ಲಕ್ಷ ಮತದಾರರು ಕಡಿಮೆಯಾಗಿ ಒಟ್ಟು 7.42 ಕೋಟಿ ಮತದಾರರು ಇದ್ದಾರೆ.
ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡುಪಟ್ಟಿಯಲ್ಲಿ ಗೈರು ಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡು ಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.


















