ನವದೆಹಲಿ/ಕೊಲಂಬೊ: ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ 61 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ, ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಬಿಪಿ ನ್ಯೂಸ್‌ನೊಂದಿಗೆ ಮಾತನಾಡಿದ ಅಖ್ತರ್, ಪಾಕಿಸ್ತಾನ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಗೆ ಮಂಡಳಿಯ ಅಸಮರ್ಥ ನಾಯಕತ್ವವೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಹಿರಿಯ ಆಟಗಾರರ ಸತತ ವೈಫಲ್ಯ ಮತ್ತು ಮಂಡಳಿಯ ತಪ್ಪು ನಿರ್ಧಾರಗಳ ವಿರುದ್ಧ ಅವರು ಹರಿಹಾಯ್ದಿದ್ದಾರೆ.
“ಅಯೋಗ್ಯರಿಗೆ ಅಧಿಕಾರ ನೀಡುವುದು ದೊಡ್ಡ ಅಪರಾಧ”
ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅಖ್ತರ್, ಕ್ರಿಕೆಟ್ ಬಗ್ಗೆ ಆಳವಾದ ಜ್ಞಾನವಿಲ್ಲದವರ ಕೈಗೆ ಅಧಿಕಾರ ನೀಡಿರುವುದು ತಂಡದ ಅವನತಿಗೆ ಕಾರಣವಾಗಿದೆ ಎಂದರು.
“ಒಬ್ಬ ವ್ಯಕ್ತಿಗೆ ತಾನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಂಬುದೇ ತಿಳಿದಿಲ್ಲದಿರುವಾಗ ತಂಡ ಹೇಗೆ ಮುನ್ನಡೆಯಲು ಸಾಧ್ಯ? ನೀವು ಒಬ್ಬ ಆಟಗಾರನನ್ನು ಸೂಪರ್ ಸ್ಟಾರ್ ಮಾಡುತ್ತೀರಿ, ಆದರೆ ಆತನಿಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಿಸಿಕೊಡಲು ಸಾಧ್ಯವಾಗುವುದಿಲ್ಲ. ಅಂತಹ ಆಟಗಾರರನ್ನು ಆಯ್ಕೆ ಮಾಡಿದರೆ ಸಮಸ್ಯೆಗಳು ಎದುರಾಗುವುದು ಸಹಜ,” ಎಂದು ಅಖ್ತರ್ ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಪ್ರಪಂಚದ ಅತಿದೊಡ್ಡ ಅಪರಾಧವೇನೆಂದರೆ, ಅಸಮರ್ಥ ಮತ್ತು ಅನರ್ಹ ವ್ಯಕ್ತಿಗೆ ದೊಡ್ಡ ಜವಾಬ್ದಾರಿಯನ್ನು ನೀಡುವುದು. ಯಾವಾಗ ನೀವು ಅಯೋಗ್ಯ ಮತ್ತು ಅಜ್ಞಾನಿ ವ್ಯಕ್ತಿಗೆ ಉನ್ನತ ಹುದ್ದೆಯನ್ನು ನೀಡುತ್ತೀರೋ, ಆತ ಆ ಇಡೀ ವ್ಯವಸ್ಥೆಯನ್ನೇ ನಾಶ ಮಾಡುತ್ತಾನೆ. ಸಂಸ್ಥೆಯನ್ನು ಅಧಃಪತನಕ್ಕೆ ತಳ್ಳುತ್ತಾನೆ. ಇದಕ್ಕೆ ನಮ್ಮ ಕಣ್ಣ ಮುಂದೆಯೇ ಉದಾಹರಣೆಯಿದೆ,” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹಿರಿಯ ಆಟಗಾರರ ವಿರುದ್ಧ ಆಕ್ರೋಶ
ಬಾಬರ್ ಅಜಮ್, ಶಾಹೀನ್ ಶಾ ಆಫ್ರಿದಿ ಮತ್ತು ಶದಾಬ್ ಖಾನ್ ಅವರಂತಹ ಹಿರಿಯ ಆಟಗಾರರು ನಿರ್ಣಾಯಕ ಪಂದ್ಯಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೂ, ಅವರಿಗೆ ಬೆಂಬಲ ನೀಡುತ್ತಿರುವುದನ್ನು ಅಖ್ತರ್ ಪ್ರಶ್ನಿಸಿದ್ದಾರೆ. ಭಾರತದಂತಹ ಪ್ರಬಲ ಎದುರಾಳಿಗಳ ವಿರುದ್ಧ ಒತ್ತಡ ನಿಭಾಯಿಸಲು ವಿಫಲರಾಗುತ್ತಿರುವ ಈ ‘ಸ್ಟಾರ್’ ಆಟಗಾರರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ವಿರುದ್ಧದ ಸೋಲು ಪಾಕಿಸ್ತಾನದ ಕ್ರಿಕೆಟ್ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಅಖ್ತರ್ ಅವರ ಈ ಹೇಳಿಕೆ ಈಗ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಟೀಮ್ ಇಂಡಿಯಾ ಎದುರು ಹೀನಾಯ ಸೋಲು : ಬಾಬರ್, ಶಾಹೀನ್, ಶದಾಬ್ ವಿರುದ್ಧ ಗುಡುಗಿದ ಮಾಜಿ ನಾಯಕ!



















