ಬೆಂಗಳೂರು: ನಿರ್ಮಾಣ ಹಂತದ 3ನೇ ಮಹಡಿಯಲ್ಲಿ ತ್ರಿಬಲ್ ಮರ್ಡರ್ ನಡೆದ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಸರ್ಜಾಪುರದ ಪೋರ್ ವಾಲ್ ಅವೆನ್ಯೂ ಅಪಾರ್ಟ್ ಮೆಂಟ್ ನಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿ, ಕಂಠಪೂರ್ತಿ ಕುಡಿದ ಬಿಹಾರ ಮೂಲದ ಸ್ನೇಹಿತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಕೊಲೆಯಾಗಿದ್ದಾರೆ.
ಅಪಾರ್ಟ್ಮೆಂಟ್ ನ ಪ್ಯಾಸೇಜ್ ನಲ್ಲಿ ಒಂದು ಶವ, ಅಪಾರ್ಟ್ಮೆಂಟ್ ನ ಕೊಠಡಿಯಲ್ಲಿ ಎರಡನೇ ಶವ, ಅಪಾರ್ಟ್ಮೆಂಟ್ ಹೊರ ಭಾಗದಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಬಿಹಾರ ಮೂಲದ ಅನ್ಸು(22), ರಾಧೆ ಶ್ಯಾಮ್(23) ಹಾಗೂ ಮತ್ತೋರ್ವ ಕೊಲೆಯಾಗಿರುವ ವ್ಯಕ್ತಿಗಳು.
ಈ ತ್ರಿಬಲ್ ಮರ್ಡರ್ ಗೆ ಯುವತಿಯ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದೇ ಕಾರಣ ಎಂದು ತಿಳಿದು ಬಂದಿದೆ. ಪ್ರಕರಣದ ಆರೋಪಿಯೊಬ್ಬನ ತಂಗಿಯ ಬಗ್ಗೆ ಕೊಲೆಯಾಗಿರುವವರ ಪೈಕಿ ಓರ್ವ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ವಿಚಾರಕ್ಕೆ ಕಟ್ಟಡ ಕಾರ್ಮಿಕರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಬಡಿದಾಡಿಕೊಂಡವರೆಲ್ಲ ಬಿಹಾರ ಮೂಲದವರಾಗಿದ್ದು, ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಂಪನಿಯು ಮೂರು ದಿನ ರಜೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾರ್ಟಿ ಮಾಡುವುದಕ್ಕಾಗಿ ಆರೋಪಿಗಳು, ಸ್ನೇಹಿತರನ್ನು ಕರೆದಿದ್ದರು ಎನ್ನಲಾಗಿದೆ.
ದೊಡ್ಡ ಕನ್ನಲ್ಲಿ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸ್ನೇಹಿತರು ಕೂಡ ಪಾರ್ಟಿಗೆ ಬಂದಿದ್ದಾರೆ. ಎಲ್ಲರೂ ಸೇರಿ ನಾನ್ ವೆಜ್ ಜೊತೆ ಕಂಠಪೂರ್ತಿ ಕುಡಿದಿದ್ದಾರೆ. ಈ ಪಾರ್ಟಿಯಲ್ಲಿ ಸುಮಾರು ಏಳೆಂಟು ಜನ ಇದ್ದರು ಎನ್ನಲಾಗಿದೆ.
ಈ ವೇಳೆ ಕೊಲೆಯಾಗಿರುವ ವ್ಯಕ್ತಿಯೊಬ್ಬ ಆರೋಪಿ ತಂಗಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಎಲ್ಲರೂ ಗಲಾಟೆ ಮಾಡಿಕೊಂಡಿದ್ದಾರೆ. ಹೊರಗಿನಿಂದ ಬಂದ ನಾಲ್ವರು ಸ್ನೇಹಿತರ ಮೇಲೆ ರಾಡ್, ದೊಣ್ಣೆಯಿಂದ ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ರಾಧೆಶ್ಯಾಮ್ ಸಹೋದರ ಬೀರಬಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ತಂಡ ರಚನೆ ಮಾಡಲಾಗಿದ್ದು, ಸದ್ಯದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ಹೇಳಿದ್ದಾರೆ.