ಮಂಗಳೂರು | ಬೆಳ್ತಂಗಡಿ ಜನರನ್ನು ಬೆಚ್ಚಿಬೀಳಿಸಿದ್ದ 16 ವರ್ಷದ ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಯತ್ನ ಪ್ರಕರಣಕ್ಕೆ ಇದೀಗ ಅಚ್ಚರಿ ಹುಟ್ಟಿಸುವಂತಹ ತಿರುವು ಸಿಕ್ಕಿದೆ. ಹೌದು.. ಫೆ.09ರಂದು ಬೆಳ್ತಂಗಡಿ ತಾಲೂಕಿನ ಸುದೆಮೊಗರು ಎಂಬಲ್ಲಿ ಬೆಳಗ್ಗೆ 8:20ಕ್ಕೆ ತಂದೆಯ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮೂವರು ಮುಸುಕುಧಾರಿಗಳು ಓಮಿನಿ ಕಾರಿನಲ್ಲಿ ಬಂದು ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದರು ಎಂಬುದಾಗಿ ಸುದ್ದಿಯಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಇಡೀ ದಿನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಪೊಲೀಸರು ಆಸುಪಾಸಿನಲ್ಲಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದರು. ಪೊಲೀಸರಿಗೆ ಸಾಂದರ್ಭಿಕ ಸಾಕ್ಷ್ಯಗಳು ಸಿಗದೇ ಇದ್ದುದರಿಂದ ವಿದ್ಯಾರ್ಥಿನಿಯನ್ನೇ ಹೆಚ್ಚುವರಿ ಮಾಹಿತಿ ಪಡೆಯಲು ವಿಧ್ಯಾರ್ಥಿನಿಯ ವಿಚಾರಣೆ ನಡೆಸಿದ್ದರು.
ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಬಾಲಕಿಯ ಕಿಡ್ನಾಪ್ ಮಹಾ ಡ್ರಾಮಾ ಬಯಲಿಗೆ ಬಂದಿದ್ದು, ಆಕೆಯ ಬಾಯಿಂದಲೇ ಕಟ್ಟುಕತೆ ಬಯಲಾಗಿದೆ. ಆಕೆಗೆ ಮಂಗಳೂರಿನಲ್ಲಿರುವ ಪಿಯುಸಿ ಕಾಲೇಜು ಸೇರ್ಪಡೆಯಾಗಬೇಕಿತ್ತು. ಆದರೆ, ಮನೆಯವರು ಬೆಳ್ತಂಗಡಿಯಲ್ಲೇ ಕಾಲೇಜಿಗೆ ಸೇರಿಸಿದ್ದರು. ಕಾಲೇಜು ಬದಲಿಸುವ ಸಲುವಾಗಿ ಆಕೆ ತಾನೇ ಕಿಡ್ನಾಪ್ ಡ್ರಾಮಾ ಸೃಷ್ಟಿಸಿದ್ದಳು.
ಬ್ಯಾಗ್‌ನಲ್ಲಿರೋ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿ, ಶಾಲಾ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಳು. ವಿದ್ಯಾರ್ಥಿನಿ ಸ್ಕೂಟಿಯನ್ನು ನಿಲ್ಲಿಸಿ ತಾನೇ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು ಎಂಬುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮ ನೋಡಿ ಪೊಲೀಸರು ಹಾಗೂ ಸ್ಥಳೀಯರು ದಂಗಾಗಿ ಹೋಗಿದ್ದಾರೆ.
ಇದನ್ನೂ ಓದಿ : ಚೈತ್ರಾ ಕುಂದಾಪುರ vs ಅಶ್ವಿನಿ ಗೌಡ.. ಬಿಗ್‌ಬಾಸ್ ಮುಗಿದರೂ ಇಬ್ಬರ ‘ಕಾಳಗ’ ಮಾತ್ರ ಮುಗಿದಿಲ್ಲ!



















