ಬೆಂಗಳೂರು: ಇತ್ತ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿ ಅಗತ್ಯವಸ್ತುಗಳ ಮೇಲಿನ ಬೆಲೆ ಕಡಿಮೆಯಾದರೆ, ಇತ್ತ ಕೆಎಂಎಫ್ ಗ್ರಾಹಕರಿಗೆ ದರ ಏರಿಕೆಯ ಶಾಕ್ ನೀಡಿದೆ. ಹಾಲಿನ ಉತ್ಪನ್ನಗಳ ಮೇಲಿನ ದರವನ್ನು ಕೆಎಂಎಫ್ ಕಡಿಮೆ ಮಾಡಿದೆಯಾದರೂ ದೇಸಿ ಹಾಲಿನ ದರ ಏರಿಕೆ ಮಾಡಿ ಬಿಗ್ ಶಾಕ್ ನೀಡಿದೆ.

ದೇಸಿ ಹಾಲಿನ ದರ 40 ರೂ. ಹೆಚ್ಚಳ
ಕೆಎಂಎಫ್ ನಂದಿನಿ ದೇಸಿ ಹಾಲು ಬಳಸುವವರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ. ಏಕಾಏಕಿ ಲೀಟರ್ ದೇಸಿ ಹಾಲಿಗೆ 40 ರೂಪಾಯಿ ಹೆಚ್ಚಳ ಮಾಡಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಮಾಡುವಂತೆ ಕೆಎಂಎಫ್ ಆದೇಶ ಹೊರಡಿಸಿದೆ. ಈ ಹಿಂದೆ ನಂದಿನಿ ದೇಸಿ ಹಾಲು ಲೀಟರ್‌ಗೆ 80 ರೂಪಾಯಿ ಇತ್ತು. ಅರ್ಧ ಲೀಟರ್ ದೇಸಿ ಹಾಲು 40 ರೂ. ಇತ್ತು. ಈಗ ಲೀಟರ್ ದೇಸಿ ಹಾಲಿಗೆ 120 ರೂ. ಅರ್ಧ ಲೀಟರ್ 60 ರೂಪಾಯಿ ಮಾಡಲಾಗಿದೆ.

ದೇಸಿ ಹಸುವಿನ ಹಾಲು ಮಾರಾಟ ಮಾಡುತ್ತಿರುವ ಕೆಎಂಎಫ್
ದೇಸಿ ಹಾಲಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾದ ಹಿನ್ನೆಲೆ ಕೆಎಂಎಂಫ್ ಹಾಲು ಮಾರಾಟ ಮಾಡುತ್ತಿತ್ತು. ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಕೆಎಂಎಫ್ ಮಾರಾಟ ಮಾಡುತ್ತಿತ್ತು. ಬೆಂಗಳೂರು ಡೈರಿಗೆ ಪ್ರತಿದಿನ 3 ಸಾವಿರ ಲೀಟರ್ ದೇಸಿ ಹಾಲು ಪೂರೈಕೆಯಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ದೇಸಿ ಹಸು ದಿನಕ್ಕೆ 1-2 ಲೀಟರ್ ಗರಿಷ್ಠ ಹಾಲು ಕೊಡುತ್ತದೆ. ದೇಸಿ ಹಸು ಹಾಲಿಗೆ ಹೆಚ್ಚಿನ ಡಿಮ್ಯಾಂಡ್ ಹಿನ್ನೆಲೆ ಬೆಂಗಳೂರು ಡೈರಿಯಲ್ಲಿ ಮಾತ್ರ ದೇಸಿ ಹಾಲು ಮಾರಾಟ ಮಾಡಲಾಗ್ತಿತ್ತು. ದೇಸಿ ಹಸುವಿನ ಹಾಲು ಪೂರೈಕೆ ಕಡಿಮೆ ಆದ ಕಾರಣ ಅನಿವಾರ್ಯವಾಗಿ ದರ ಏರಿಕೆ ಮಾಡುತ್ತಿದ್ದೇವೆಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.



















