ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿದ್ದ ಭಕ್ತನ ಮೇಲೆ ಚಿರತೆ ದಾಳಿ ಮಾಡಿರುವ ಶಂಕಾಸ್ಪದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟದಿಂದ ಮೆಟ್ಟಿಲು ಹತ್ತಿ ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿರುವುದು ತಿಳಿದುಬಂದಿದೆ.
ಮಂಡ್ಯ ತಾಲೂಕಿನ ಚಿರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್ ಎಂಬವರು ಚಿರತೆ ದಾಳಿಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಚಿರತೆಯನ್ನು ಕಂಡು ಪ್ರವೀಣ್ ಜೊತೆಗಿದ್ದ ಸ್ನೇಹಿತರು ಭಯಭೀತರಾಗಿ ಅಲ್ಲಿಂದ ಓಡಿ ಹೋಗಿದ್ದು, ಆ ಬಳಿಕ ಪ್ರವೀಣ್ ನಾಪತ್ತೆಯಾಗಿದ್ದಾರೆ.
ಪ್ರವೀಣ್ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದರೂ ರಿಂಗ್ ಆಗುತ್ತಿದ್ದು, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಚಿರತೆ ದಾಳಿಗೆ ಒಳಪಟ್ಟಿರುವ ಶಂಕೆ ಮತ್ತಷ್ಟು ಗಟ್ಟಿಯಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಭಕ್ತನ ಪತ್ತೆಗೆ ತೀವ್ರ ಪ್ರಯತ್ನಗಳು ನಡೆಯುತ್ತಿವೆ.
ಇದೇ ವೇಳೆ ಕಳೆದ ವಾರ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಚಿರತೆ ಹಾಗೂ ಅದರ ಮರಿಗಳು ಕಾಣಿಸಿಕೊಂಡಿದ್ದವು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ : ಉಡುಪಿ | ಸಿದ್ದಾಪುರ ಏತ ನೀರಾವರಿ ಯೋಜನೆಗೆ ಒತ್ತಾಯಿಸಿ ಜನಾಗ್ರಹ ಸಭೆ, ರೈತರ ಪ್ರತಿಭಟನೆ



















