ಬೆಂಗಳೂರು : ಬಿಬಿಎಂಪಿಯಲ್ಲಿ ಮತ್ತೊಂದು ಮಹಾ ಹಗರಣ ನಡೆದಿರುವುದು ಬೆಳಕಿಗೆ ಬಂದಿde̤ ಬಿಬಿಎಂಪಿಯ ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ನಾಗಭೂಷಣ್ ವಿರುದ್ಧ ಭ್ರಷ್ಟಚಾರದ ಆರೋಪ ಕೇಳಿ ಬಂದಿದೆ.
ಸಹಾಯಕ ಆಯುಕ್ತರು ಅಮೃತ ಮಹೋತ್ಸವ ಯೋಜನೆ ಅಡಿ ಬಿಡುಗಡೆಯಾಗಿರುವ 27.50 ಕೋಟಿ ರೂ ಅನುಧಾನವನ್ನು ದುರುಪಯೋಗ ಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 550 ಅಭ್ಯರ್ಥಿಗಳ ಖಾತೆಗೆ ತಲಾ 5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಬಂದಿದೆ.
ಮಹದೇವಪುರ ವಲಯದ ಕಲ್ಯಾಣ ಇಲಾಖೆ ಸಹಾಯಕ ಕಂದಾಯ ಅಧಿಕಾರಿಯಾಗಿರುವ ನಾಗಭೂಷಣ್, ಅರ್ಹತೆ ಪರಿಗಣಿಸದೇ ಷರತ್ತು ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ದಾಖಲಿಸಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿದ್ದ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಜೊತೆ ಕೆಲವು ದಲ್ಲಾಳಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 2022-23, 2023-24, 2024-25 ಮೂರು ವರ್ಷಗಳಲ್ಲಿ ಹಗರಣ ನಡೆದಿದ್ದು, ಅಧಿಕಾರಿಯು ಹಣ ದಾಹಕ್ಕೆ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಕೂಡಲೇ ಅಕ್ರಮವಾಗಿ ವರ್ಗವಾಣೆ ಮಾಡಿರುವ ಹಣವನ್ನು ವಸೂಲಿ ಮಾಡುವಂತೆ ಆಗ್ರಹಿಸಿದ್ದಲ್ಲದೇ, ಸಹಾಯಕ ಆಯುಕ್ತ ನಾಗಭೂಷಣ್ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ಅಕ್ರಮ ಹಣ ದುರ್ಬಳಕೆ, ನಕಲಿ ದಾಖಲೆ ತಯಾರಿಕೆ ಪ್ರಕರಣಗಳ ಅಡಿ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.

(BBMP ಕಲ್ಯಾಣ ಇಲಾಖೆ ಸಹಾಯಕ ಆಯುಕ್ತ ನಾಗಭೂಷಣ್)
“ಅಮೃತ ಮಹೋತ್ಸವ ಯೋಜನೆಯಡಿ ಹಣ ಬಿಡುಗಡೆಗೆ ಮಾನದಂಡಗಳು !”
– ರಾಜೀವ್ ಗಾಂಧಿ, ಸ್ಲಂ ಬೋರ್ಡ್, ಬಿಡಿಎ, ಕೆಹೆಚ್ ಬಿಯಲ್ಲಿ ಅರ್ಜಿ ಸಲ್ಲಿಸಿರಬೇಕು.
– ಅರ್ಜಿದಾರ 1 ಬಿಹೆಚ್ ಕೆ ಮನೆಗೆ ಅರ್ಜಿ ಸಲ್ಲಿಸಿರಬೇಕು.
– ಅರ್ಜಿ ಸಲ್ಲಿಸಿ ಮನೆ ಮಂಜೂರು ಪ್ರಮಾಣ/ಹಂಚಿಕ ಪತ್ರ ಹೊಂದಿರಬೇಕು.
– ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ 3 ವರ್ಷದಿಂದ ವಾಸಿಸುತ್ತಿರಬೇಕು.
– ಅಗತ್ಯ ದಾಖಲೆಗಳೊಂದಿಗೆ ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರಬೇಕು.
– ಸರ್ಕಾರದಿಂದ ನೀಡುವ ಗುರುತಿನ ಚೀಟಿ ಕಡ್ಡಾಯವಾಗಿ ಪಡೆದಿರಬೇಕು.
– ವಾರ್ಷಿಕ ಆದಾಯ 3 ಲಕ್ಷ ಮೀರಬಾರದು.
– ಕುಟುಂಬದ ಯಾವ ಸದಸ್ಯರೂ ಸ್ವಂತ ನಿವೇಶನ/ಕಟ್ಟಡ ಹೊಂದಿರಬಾರದು.
-ಅರ್ಜಿದಾರ 20 ರೂ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸಬೇಕು.
“ಆಯ್ಕೆ ಹೇಗೆ ನಡೆಯುತ್ತದೆ ?”
– ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಸರ್ಕಾರದಿಂದ ಆರ್ಥಿಕ ಸಹಾಯ.
– ಸಬ್ಸಿಡಿ ರೂದಪಲ್ಲಿ ಗರಿಷ್ಠ 5 ಲಕ್ಷ ನೇರವಾಗಿ ಅಕೌಂಟ್ ಗೆ ವರ್ಗಾವಣೆ .
– ಅನುದಾನದ ಲಭ್ಯತೆ ಪರಿಶೀಲಿಸಿ ಅರ್ಜಿದಾರರ ಆಯ್ಕೆ.
-ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ವಿಳಾಸ ಭೌತಿಕ ಪರಿಶೀಲನೆ ನಡೆಸಬೇಕು.
-ಸಂಬಂಧಪಟ್ಟ ವಲಯದ ಸಹಾಯಕ ಕಂದಾಯ ಅಧಿಕಾರಿ ಪರಿಶೀಲಿಸಬೇಕು.
-ಸೂಕ್ತ ಶಿಫಾರಸ್ಸಿನೊಂದಿಗೆ ವಾರ್ಡ್ ಸಮಿತಿ ಅನುಮೋದನೆ ಪಡೆದು ಕ್ರಮ.
-ಶಿಫಾರಸ್ಸಿನೊಂದಿಗೆ ವಾರ್ಡ್ ಸಮಿತಿಗಳ ಅನುಮೋದನೆ ಪಡೆದು ಹಣ ವರ್ಗಾವಣೆ.