ನವದೆಹಲಿ: ಭಾರತದಲ್ಲಿ ತಯಾರಾಗುವ ಹಾಗೂ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಇನ್ನು ಮುಂದೆ ಸರ್ಕಾರದ ‘ಸಂಚಾರ್ ಸಾಥಿ‘ (Sanchar Saathi) ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕೇಂದ್ರ ಸರ್ಕಾರ ಮೊಬೈಲ್ ತಯಾರಕ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸೈಬರ್ ವಂಚನೆಯಿಂದ ನಾಗರಿಕರನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದರೆ, ವಿರೋಧ ಪಕ್ಷಗಳು ಇದನ್ನು ಜನರ ಮೇಲಿನ ‘ಗೂಢಚರ್ಯೆ’ ಎಂದು ಟೀಕಿಸಿವೆ.
ಕೇಂದ್ರದ ಆದೇಶದಲ್ಲೇನಿದೆ?
ಕೇಂದ್ರ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ದೂರಸಂಪರ್ಕ ಇಲಾಖೆಯು (DoT) ಮೊಬೈಲ್ ತಯಾರಕರಿಗೆ ಈ ಸೂಚನೆ ನೀಡಿದೆ. ನವೆಂಬರ್ 28 ರಿಂದ ಅನ್ವಯವಾಗುವಂತೆ, ಮುಂದಿನ 90 ದಿನಗಳ ಒಳಗಾಗಿ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹ್ಯಾಂಡ್‌ಸೆಟ್‌ಗಳಲ್ಲಿ ‘ಸಂಚಾರ್ ಸಾಥಿ’ ಆಪ್ ಪ್ರೀ-ಇನ್‌ಸ್ಟಾಲ್ (ಪೂರ್ವನಿಯೋಜಿತವಾಗಿ ಅಳವಡಿಕೆ) ಆಗಿರಬೇಕು ಎಂದು ತಿಳಿಸಲಾಗಿದೆ.
ಫೋನ್ ಸೆಟಪ್ ಮಾಡುವಾಗ ಅಥವಾ ಮೊದಲ ಬಾರಿ ಬಳಸುವಾಗ ಈ ಆಪ್ ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತಿರಬೇಕು ಮತ್ತು ಅದರ ಕಾರ್ಯಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಲು (Disable) ಸಾಧ್ಯವಾಗದಂತಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಬಳಕೆಯಲ್ಲಿರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಆಪ್ ಅನ್ನು ತಲುಪಿಸಲು ಸೂಚಿಸಲಾಗಿದೆ.
ಏನಿದು ಸಂಚಾರ್ ಸಾಥಿ? ಇದರ ಉಪಯೋಗವೇನು?
‘ಸಂಚಾರ್ ಸಾಥಿ’ ಎನ್ನುವುದು ಕೇಂದ್ರದ ಡಿಜಿಟಲ್ ಸುರಕ್ಷತಾ ಉಪಕ್ರಮವಾಗಿದೆ. ಇದು ಮುಖ್ಯವಾಗಿ ಎರಡು ಉದ್ದೇಶಗಳನ್ನು ಹೊಂದಿದೆ:
ಸೈಬರ್ ವಂಚನೆ ತಡೆ: ಇದರಲ್ಲಿರುವ ‘ಚಕ್ಷು’ (Chakshu) ಎಂಬ ವೈಶಿಷ್ಟ್ಯದ ಮೂಲಕ ಬಳಕೆದಾರರು ಅನುಮಾನಾಸ್ಪದ ಕರೆಗಳು, ಸಂದೇಶಗಳು ಅಥವಾ ಫಿಶಿಂಗ್ ಲಿಂಕ್‌ಗಳ ಬಗ್ಗೆ ವರದಿ ಮಾಡಬಹುದು.
ಮೊಬೈಲ್ ರಿಕವರಿ: ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ಮತ್ತು ಪತ್ತೆಹಚ್ಚಲು ಈ ಪೋರ್ಟಲ್ ನೆರವಾಗುತ್ತದೆ. ಈಗಾಗಲೇ 42 ಲಕ್ಷ ಕದ್ದ ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, 26 ಲಕ್ಷ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ವೆಬ್‌ಸೈಟ್ ಮಾಹಿತಿ ನೀಡಿದೆ .
ವಿಪಕ್ಷಗಳ ಆಕ್ಷೇಪವೇಕೆ?
ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇದು ಸಂವಿಧಾನದ 21ನೇ ವಿಧಿ ನೀಡಿರುವ ‘ಗೌಪ್ಯತೆಯ ಹಕ್ಕು’ಗಳ ಉಲ್ಲಂಘನೆ ಎಂದು ಆರೋಪಿಸಿವೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮಾತನಾಡಿ, “ಇದು ಅಸಾಂವಿಧಾನಿಕ ನಡೆ.
ಅನ್‌ಇನ್‌ಸ್ಟಾಲ್ ಮಾಡಲು ಸಾಧ್ಯವಾಗದ ಸರ್ಕಾರಿ ಆ್ಯಪ್ ಅನ್ನು ಫೋನ್‌ನಲ್ಲಿ ತುರುಕುವುದು ಡಿಸ್ಟೋಪಿಯನ್ (ದಮನಕಾರಿ) ಕ್ರಮವಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಚಲನವಲನ ಮತ್ತು ನಿರ್ಧಾರಗಳ ಮೇಲೆ ಕಣ್ಣಿಡುವ ತಂತ್ರ,” ಎಂದು ಅವರು ಕಿಡಿಕಾರಿದ್ದಾರೆ .
ಶಿವಸೇನೆ(ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಇದನ್ನು “ಬಿಗ್ ಬಾಸ್ ಸರ್ವೈಲೆನ್ಸ್” ಎಂದು ಕರೆದಿದ್ದು, “ವೈಯಕ್ತಿಕ ಫೋನ್‌ಗಳಲ್ಲಿ ಇಣುಕಿ ನೋಡುವ ಇಂತಹ ಅನುಮಾನಾಸ್ಪದ ನಡೆಗಳನ್ನು ವಿರೋಧಿಸಬೇಕಿದೆ. ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಬದಲು ಕಣ್ಗಾವಲು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ,” ಎಂದು ಟೀಕಿಸಿದ್ದಾರೆ.
ಮೊಬೈಲ್ ಕಂಪನಿಗಳ ಪ್ರತಿಕ್ರಿಯೆ ಏನು?
ವರದಿಗಳ ಪ್ರಕಾರ, ಸರ್ಕಾರದ ಈ ಆದೇಶದ ಬಗ್ಗೆ ಮೊಬೈಲ್ ತಯಾರಕ ಕಂಪನಿಗಳೊಂದಿಗೆ ಯಾವುದೇ ಪೂರ್ವಭಾವಿ ಸಮಾಲೋಚನೆ ನಡೆದಿಲ್ಲ. ಗೌಪ್ಯತೆ ಮತ್ತು ಭದ್ರತೆಯ ಕಾರಣಗಳನ್ನು ಮುಂದಿಟ್ಟು ಆಪಲ್ (Apple) ನಂತಹ ದಿಗ್ಗಜ ಕಂಪನಿಗಳು ಈ ನಿರ್ಧಾರವನ್ನು ವಿರೋಧಿಸುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಆ್ಯಪಲ್ ಇಂತಹ ಸರ್ಕಾರಿ ನಿರ್ದೇಶನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ಇದನ್ನೂ ಓದಿ; ಸುರಂಗದೊಳಗೆ ಕೆಟ್ಟು ನಿಂತ ಚೆನ್ನೈ ಮೆಟ್ರೋ : ಹಳಿಗಳ ಮೇಲೆ ನಡೆದು ಮುಂದಿನ ನಿಲ್ದಾಣ ತಲುಪಿದ ಪ್ರಯಾಣಿಕರು



















