ಬೆಂಗಳೂರು: ಕೇಂದ್ರ ಸರ್ಕಾರವು ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ ತರುವ, ಅದನ್ನು ಇನ್ನಷ್ಟು ಸರಳಗೊಳಿಸುವ ದಿಸೆಯಲ್ಲಿ ನೂತನ ಆದಾಯ ತೆರಿಗೆ ವಿಧೇಯಕ (Income Tax Bill 2025) ಮಂಡಿಸಿದೆ. ಇದಕ್ಕೆ ಲೋಕಸಭೆಯಲ್ಲಿ ಅಂಗೀಕಾರವೂ ದೊರೆತಿದೆ. ನೂತನ ವಿಧೇಯಕದ ಪ್ರಕಾರ, ತೆರಿಗೆದಾರರಿಗೆ ಹಲವು ಪ್ರಯೋಜನಗಳನ್ನು ನೀಡಿದೆ. ಅದರಲ್ಲೂ, ಪಿಂಚಣಿದಾರರು ಏಕಕಾಲಕ್ಕೆ ಪಡೆಯುವ ಬೃಹತ್ ಮೊತ್ತವನ್ನು ಸಂಪೂರ್ಣವಾಗಿ ತೆರಿಗೆಯಿಂದ ವಿನಾಯಿತಿ ನೀಡಿರುವುದು ಮಹತ್ವದ ಸಂಗತಿಯಾಗಿದೆ.
ಹೌದು, ಕಮ್ಯುಟೆಡ್ ಪೆನ್ಶನ್ ಅಂದರೆ, ಮಾಸಿಕವಾಗಿ ಪಿಂಚಣಿ ಪಡೆಯುವ ಬದಲು, ಒಂದೇ ಬಾರಿಗೆ ಬೃಹತ್ ಮೊತ್ತವನ್ನು ಪಿಂಚಣಿಯಾಗಿ ಡ್ರಾ ಮಾಡುವವರಿಗೆ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ, ನೌಕರರು ಮುಂದಿನ 10 ವರ್ಷದ ಪಿಂಚಣಿಯನ್ನು ಈಗಲೇ ಡ್ರಾ ಮಾಡಿದರೆ, ಅವರಿಗೆ ದೊಡ್ಡ ಮೊತ್ತವೇ ಸಿಗುತ್ತದೆ. ಮೊದಲು ಕೆಲ ಆಯ್ದ ನೌಕರರಿಗೆ ಮಾತ್ರ ಹೀಗೆ ಡ್ರಾ ಮಾಡಿದ ಹಣಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೀಗ, ನೂತನ ವಿಧೇಯಕದ ಪ್ರಕಾರ, ಕಮ್ಯುಟೆಡ್ ಪೆನ್ಶನ್ ಪಡೆಯುವ ಎಲ್ಲ ನೌಕರರಿಗೂ ತೆರಿಗೆ ವಿನಾಯಿತಿ ಅನ್ವಯವಾಗಲಿದೆ.
ಇದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮಾತ್ರವಲ್ಲ, ಅನುಮೋದಿತ ಪೆನ್ಶನ್ ಫಂಡ್ ಗಳು ಅಂದರೆ, ಎಲ್ಐಸಿ ಪೆನ್ಶನ್ ಫಂಡ್ ಗಳಂತಹ ಫಂಡ್ ಗಳಲ್ಲಿ ಹೂಡಿಕೆ ಮಾಡಿದವರಿಗೂ ಅನ್ವಯವಾಗುತ್ತದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ. ಏಕಕಾಲಕ್ಕೆ ಪಿಂಚಣಿ ಪಡೆಯುವವರು ಇನ್ನುಮುಂದೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ನೂತನ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಪಿಂಚಣಿದಾರರಿಗೆ ಭಾರಿ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರವು 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡುವ, ತೆರಿಗೆ ಸುಧಾರಣೆಗಳನ್ನು ತರುವ ಜತೆಗೆ ಕಾಯ್ದೆಯನ್ನು ಸರಳಗೊಳಿಸುವ ದಿಸೆಯಲ್ಲಿ ಹೊಸ ವಿಧೇಯಕವನ್ನು ಮಂಡಿಸಿದೆ. ಇದಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತು, ರಾಷ್ಟ್ರಪತಿ ಅವರು ಅನುಮೋದನೆ ನೀಡಿದ ಬಳಿಕ ಜಾರಿಗೆ ಬರಲಿದೆ.