ಬೆಂಗಳೂರು: ಕೊನೆಗೂ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಅಡ್ಡಿಯಾಗಿದ್ದ ಬಹುದೊಡ್ಡ ಸಮಸ್ಯೆಗೆ ಪರಿಹಾರ ದೊರೆತಿದೆ. ಸೆಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿ ಅಗತ್ಯ ಜಾಗ ನೀಡಲು ಒಪ್ಪಿಗೆ ಸೂಚಿಸಿದ್ದು, ಜಿಬಿಎ ಜೊತೆ ಸಂಧಾನ ಯಶಸ್ವಿಯಾಗಿದೆ.
ಜಿಬಿಎ ಕಮಿಷನರ್ ಭೇಟಿ ಬಳಿಕ ಸೆಂಟ್ ಜಾನ್ ಆಸ್ಪತ್ರೆ ಆಡಳಿತ ಮಂಡಳಿ ಕಾಮಗಾರಿ ನಡೆಸಲು ಜಾಗ ಬಿಟ್ಟು ಕೊಡಲು ಒಪ್ಪಿದೆ. ಇದರಿಂದಾಗಿ ಈಜೀಪುರ ಫ್ಲೈಓವರ್ ಕಾಮಗಾರಿಗೆ ಇನ್ನು ಯಾವುದೇ ಅಡೆತಡೆ ಇರುವುದಿಲ್ಲ.
ಕೇಂದ್ರೀಯ ಸದನ್ ಕಡೆಯಿಂದ ಈಜೀಪುರದತ್ತ ಸಾಗುವ ಮಾರ್ಗದ ಎಡಭಾಗದಲ್ಲಿ, ಸೆಂಟ್ ಜಾನ್ಸ್ ಆಸ್ಪತ್ರೆ ಬಳಿ ಐದು ಪೋರ್ಟಲ್ ಪಿಯರ್ ಅಳವಡಿಸಲು ಆಸ್ಪತ್ರೆಯ ಜಾಗ ಅವಶ್ಯಕವಾಗಿತ್ತು. ಪಾದಚಾರಿ ಮಾರ್ಗ ಹಾಗೂ ಸೆಂಟ್ ಜಾನ್ಸ್ ಕಾಂಪೌಂಡ್ ಗೋಡೆಯ ಭಾಗದಲ್ಲಿ ಪೋರ್ಟಲ್ ಪಿಯರ್ ನಿರ್ಮಾಣ ಮಾಡಬೇಕಿರುವುದರಿಂದ ಈವರೆಗೆ ಕಾಮಗಾರಿ ಸ್ಥಗಿತಗೊಂಡಿತ್ತು.
ಮೊದಲು ಸೆಂಟ್ ಜಾನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ತೆರವುಗೊಳಿಸಿ ಕಾಮಗಾರಿ ನಡೆಸಬೇಕಾಗಿತ್ತು. ಇದೀಗ ಜಾಗ ನೀಡಲು ಆಸ್ಪತ್ರೆ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದ್ದು, ಕಾಮಗಾರಿ ಮುಗಿದ ನಂತರ ಕಾಂಪೌಂಡ್ ಗೋಡೆಯನ್ನು ಮರುನಿರ್ಮಿಸಿ ಕೊಡುವುದಾಗಿ ಜಿಬಿಎ ಭರವಸೆ ನೀಡಿದೆ.
ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿಲೋಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು, ಒಟ್ಟು 762 ಸೆಗ್ಮೆಂಟ್‌ಗಳನ್ನು ಕಾಸ್ಟಿಂಗ್ ಮಾಡಬೇಕಾಗಿದೆ. ಇದರಲ್ಲಿ ಈಗಾಗಲೇ 645 ಸೆಗ್ಮೆಂಟ್‌ಗಳ ಕಾಸ್ಟಿಂಗ್ ಪೂರ್ಣಗೊಂಡಿದ್ದು, ಇನ್ನೂ 117 ಸೆಗ್ಮೆಂಟ್‌ಗಳ ಕಾಸ್ಟಿಂಗ್ ಬಾಕಿಯಿದೆ.
ಇದಲ್ಲದೆ, 490 ಸೆಗ್ಮೆಂಟ್‌ಗಳ ಜೋಡಣೆ ಈಗಾಗಲೇ ಪೂರ್ಣಗೊಂಡಿದೆ. ಸೆಂಟ್ ಜಾನ್ಸ್ ಬಳಿ ಐದು ಪೋರ್ಟಲ್ ಪಿಯರ್ ನಿರ್ಮಾಣವಾದರೆ ಕಾಮಗಾರಿ ಕೊನೆಯ ಹಂತಕ್ಕೆ ವೇಗ ಸಿಗಲಿದೆ. ಈ ವರ್ಷದೊಳಗೆ ಈಜೀಪುರ ಮೇಲ್ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯುವ ನಿಟ್ಟಿನಲ್ಲಿ ಜಿಬಿಎ ಸಿದ್ಧತೆ ನಡೆಸಿದೆ.
ಇದನ್ನೂ ಓದಿ : ATM ಗೆ ಹಾಕಲು ಕೊಟ್ಟಿದ್ದ ಒಂದು ಕೋಟಿಗೂ ಅಧಿಕ ಹಣ ದೋಚಿ ಪರಾರಿಯಾದ ಸಿಬ್ಬಂದಿ



















