IPL 2025ಕ್ಕೆ ಈಗಿನಿಂದಲೇ ಅಭಿಮಾನಿಗಳು ಕಾಯುತ್ತಿದ್ದಾರೆ. 2025ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಸೆಳೆಯಲು ಯತ್ನಿಸುತ್ತಿವೆ. ರೋಹಿತ್ ಶರ್ಮಾರನ್ನು ಸೆಳೆಯಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆಫರ್ ನೀಡುತ್ತಿದ್ದರೆ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೂರ್ಯಕುಮಾರ್ ಯಾದವ್ ಗೆ ಗಾಳ ಹಾಕುತ್ತಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಈಗಾಗಲೇ ಸೂರ್ಯರೊಂದಿಗೆ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ. ಈ ವೇಳೆ ಬೃಹತ್ ಮೊತ್ತದ ಆಫರ್ ನೀಡಲಾಗಿದೆ. ಅಲ್ಲದೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಗಮಿಸಿದರೆ ನಾಯಕತ್ವವನ್ನು ಸಹ ನೀಡುವುದಾಗಿ ಹೇಳಿದೆ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಸೂರ್ಯಕುಮಾರ್ ಯಾದವ್ ಕೇವಲ 8 ಕೋಟಿ ರೂ. ಪಡೆದು ಆಡುತ್ತಿದ್ದಾರೆ. ಆದರೆ, ಕೆಕೆಆರ್ ತಂಡಕ್ಕೆ ಬಂದರೆ ನಾಯಕನಾಗಿ ಆಯ್ಕೆ ಮಾಡುವುದರೊಂದಿಗೆ ಬೃಹತ್ ಮೊತ್ತವನ್ನು ನೀಡುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.
ಹೀಗಾಗಿ ಈ ಬಾರಿ ಮೆಗಾ ಹರಾಜಿಗೂ ಮುನ್ನ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ರೋಹಿತ್ ಶರ್ಮಾ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಸೂರ್ಯ ಕಾಣಿಸಲಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಗುಜರಾತ್ ಟೈಟಾನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಕರೆತರುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡಿತ್ತು. ಈಗ ಸೂರ್ಯಕುಮಾರ್ ಯಾದವ್ ಮುಂದೆ ಕೂಡ ಇದೇ ಮಾದರಿಯ ಆಫರ್ ಇದೆ.
ಸೂರ್ಯಕುಮಾರ್ ಯಾದವ್ 2014 ರಿಂದ 2017ರವರೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಹೀಗಾಗಿ ಕೆಕೆಆರ್ ಫ್ರಾಂಚೈಸಿ ಸೂರ್ಯನ ಪಾಲಿಗೆ ಹೊಸದೇನಲ್ಲ. ಹೀಗಾಗಿ ಸೂರ್ಯಕುಮಾರ್ ಯಾದವ್ ಕೆಕೆಆರ್ ಆಫರ್ ಒಪ್ಪಿಕೊಂಡು ಹರಾಜಿನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.