ದೀಪಾವಳಿ ಭಾರತೀಯ ಹಿಂದೂಗಳ ದೊಡ್ಡಹಬ್ಬ, ಇದನ್ನು ಮಲೆನಾಡು ಭಾಗದಲ್ಲಿ ದೊಡ್ಡ ಹಬ್ಬವೆಂದೇ ಕರೆಯುವರು. ದೀಪಗಳ ಬೆಳಕಿನಲ್ಲಿ ಐದು ದಿನಗಳ ಸುಧೀರ್ಘಕಾಲ ನಡೆಸುವ ಸಂತಸದ ಕೃಷಿ ಹಬ್ಬ. ದೀಪಾವ, ಎಂದರೆ ಬೆಳಗುವ ದೀಪಗಳ ಸಾಲು. ಇದನ್ನು ಗ್ರಾಮೀಣ ಜನರು ದೀವಳಿಗೆ ಎನ್ನುವರು. ಎಲ್ಲಾ ಜನಾಂಗ ಮತ್ತು ಧರ್ಮ ಪಂಥಗಳ ಉಪಾಸನೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ದೀಪವು ಲೌಕಿಕ ಬದುಕಿನ ಅಂಧಕಾರ, ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಸಾಧನ. ಭಾರತೀಯರಲ್ಲಿ ದೀಪವು ಧರ್ಮ, ಜ್ಞಾನ, ಸಂಸ್ಕೃತಿ ಮತ್ತು ಆಧ್ಯಾತ್ಮದ ಸಂಕೇತವಾಗಿ, ಜೀವಾತ್ಮ, ಪರಮಾತ್ಮನ ದರ್ಶನ ಪ್ರತೀಕವಾಗಿದೆ. ದೀಪವು ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಪ್ರತೀಕ. ಬತ್ತಿ ಕರ್ಮದ ಸಂಕೇತವಾದರೆ ಎಣ್ಣೆ ಭಕ್ತಿಯ ಸಂಕೇತವಾಗಿದೆ.
ದೀಪಾವಳಿಯ ಮೊದಲನೇ ದಿನ ನರಕ ಚತುರ್ದಸಿ
ದೀಪಾವಳಿಯ ಮೊದಲನೇ ಹಬ್ಬ ನರಕ ಚತುರ್ದಸಿ.
ಮಲೆನಾಡಿನ ಜನ ಇದನ್ನು ಭೂರಹಬ್ಬವೆಂದು ಆಚರಿಸುವರು. ಭೂರೆಯ ದಿನದಂದು ಕೆಲವರು ತಮ್ಮ ಕುಲದೈವ ಹಾಗು ಊರಿನ ಎಲ್ಲಾ ದೈವದೇವರುಗಳನ್ನು ಪೂಜಿಸುವರು. ಕಾಲಭೈರವನ ಒಕ್ಕಲು ಕಾಲಭೈರವನ ಎದುರು ಎರಡು ಭೂರೆ ಮೊಗೆಗಳನ್ನೂ ಇಟ್ಟು ಭೈರವನನ್ನು ಪೂಜಿಸಿ, ಅದರಲ್ಲಿ ಒಂದು ಮೊಗೆಯನ್ನು ಅಲ್ಲಿಯೇ ಬಿಟ್ಟು ಇನ್ನೊಂದನ್ನು ಮನೆಗೆ ತಂದು ಇಡುಕಲ ಮೇಲಿಟ್ಟು ಪೂಜಿಸುವರು. ಅಂದು ಊರಿನ ಎಲ್ಲಾ ದೈವದೇವರನ್ನು ಪೂಜಿಸುವುದನ್ನು ನೋಣಿಕೊಡುವುದು ಎನ್ನುವರು. ಈ ದಿನ ಸೌತೇಕಾಯಿ ಅಥವಾ ಚಿನ್ನಿಕಾಯಿ ಕಡುಬನ್ನು ಬಾಳೆಲೆಯಲ್ಲಿ ಸುತ್ತಿ ತಯಾರಿಸುವುದು ಮಲೆನಾಡಿನ ವಿಶೇಷ. ಮನೆಯ ಇಡುಕಲು ಮೇಲೆ ಭೂರಿಮೊಗೆ ಇಟ್ಟು ನೈವೇದ್ಯ ಇಡುವರು.
ಈ ಭೂರೆ ದಿನದಂದು ಯುವಕರು ತುಡುಗು ಮಾಡುವುದು ಕರ್ನಾಟಕದ ಎಲ್ಲಾ ಕಡೆ ಕಂಡುಬರುತ್ತೆ ಭೂರೆಯ ದಿನ ಕಳ್ಳತನ ಮಾಡಿದರೆ ದೋಷವಿಲ್ಲ ಎಂಬ ನಂಬಿಕೆ. ಯುವಕರು ತಿನ್ನುವ ವಸ್ತುಗಳನ್ನು ಕದಿಯುವುದು ಮತ್ತು ಇನ್ನೇನಾದರು ಸಿಕ್ಕ ವಸ್ತುಗಳನ್ನು ಬಚ್ಚಿಡುವ ತುಂಟಾಟ ನಡೆಸುತ್ತಾರೆ.
ಅಮವಾಸ್ಯೆ, ದೀಪಾವಳಿಯ ಎರಡನೇ ದಿನದ ಹಬ್ಬ. ಈ ಅಮವಾಸ್ಯೆಯಂದು ನಗರ ಪ್ರದೇಶದಲ್ಲಿ ಹೆಚ್ಚಿನದಾಗಿ ಧನಲಕ್ಷ್ಮೀ ಪೂಜೆ ಮಾಡುವರು. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಪತ್ನಿಯಾದ ಲಕ್ಷ್ಮಿಯು ಉದಯವಾಗಿದ್ದು ಆಶ್ರೀಜ ಮಾಸದ ಇದೇ ಅಮವಾಸ್ಯೆಯೆಂದು ಮಲೆನಾಡಿಗರು ತಮ್ಮ ದನಕರುಗಳನ್ನು ನಾಳೆಯ ದಿನದ ಗೋಪೂಜೆಗಾಗಿ ಹೊಳೆಹಳ್ಳಗಳಲ್ಲಿ ಮೈತೊಳೆದು ಸ್ವಚ್ಛಗೊಳಿಸುವರು ಗೋವು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ದೀಪಾವಳಿಯ ಮೂರನೇ ದಿನ ಬಲಿಪಾಡ್ಯಮಿ
ದೀಪಾವಳಿಯ ಮೂರನೇ ದಿನಕ್ಕೆ ಕಾಲಿಡುವುದೇ ಬಲಿಪಾಡ್ಯಮಿ, ಅಂದು ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರಥಮ ದಿನ. ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿಯು ಮದಾಂಧನಾಗಿರಲು ವಿಷ್ಣುವು ವಾಮನ ಅವತಾರ ತಾಳಿ ಮೂರು ಪಾದದ ಭೂಮಿಯನ್ನು ಬೇಡುವ ಮೂಲಕ ಬಲಿಯನ್ನು ಪಾತಾಳಕ್ಕೆ ಕಳಿಸುವನು. ಮಹಾವಿಷ್ಣುವಿನ ವರದಂತೆ ಬಲಿಯು ಅಂದು ಪಾತಾಳದಿಂದ ಮೇಲೆ ಬಂದು ತನ್ನ ರಾಜ್ಯ ಹಾಗೂ ಪ್ರಜೆಗಳನ್ನು ನೋಡಿ ಆನಂದಿಸುವನು, ಬಲಿಪಾಡ್ಯಮಿಯು ಶ್ರೀರಾಮನಿಗೆ ಪಟ್ಟವಾದ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ದಿನ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿ ಹಿಡಿದು ಹಸುಗಳನ್ನೂ ನಂದಗೋಕುಲವನ್ನೂ ರಕ್ಷಿಸಿದ ದಿನವಾಗಿ ಮಹತ್ವ ಪಡೆದಿದೆ.
ಗೋ ಪೂಜೆ
ರೈತಾಪಿ ಜನರು ಕೃಷಿ ಹಾಗೂ ಗೋವುಗಳನ್ನು ಅಮೂಲ್ಯ ಸಂಪತ್ತೆಂದು ಪೂಜಿಸಿ ಧನ್ಯರಾಗುವರು. ಅಂದು ಬಲಿಯನ್ನು ಬಲೀಂದ್ರನೆಂದು ಪೂಜಿಸುವ ಸಂಪ್ರದಾಯವಿದೆ. ಮನೆಗೆ ತಂದ ಭೂರೆಮೊಗೆಯನ್ನು ಇಡುಕಲ ಮೇಲೆ ಸ್ವಾಮಿ, ಅದರ ಮೇಲೆ ಒಂದು ತೆಂಗಿನಕಾಯಿ, ಒಂದು ಜೊತೆ ದನ ಕಟ್ಟುವ ಹೊಸಕಣ್ಣಿಯನ್ನೂ ಇಟ್ಟು ಪೂಜಿಸುವರು. ಇವೇ ಕಣ್ಣಿಯಿಂದ ಪಾಡ್ಯದ ದಿನ ಬೆಳಿಗ್ಗೆ ಒಂದು ಎತ್ತು ಹಾಗು ಒಂದು ದನವನ್ನು ಜೋಡಿಯಲ್ಲಿ ಕೊಟ್ಟಿಗೆಯಿಂದ ಮನೆಯ ಜಗುಲಿಗೆ ಹೊಡೆದು ತಂದು ಜೊತೆಯಾಗಿ ನಿಲ್ಲಿಸಿ, ಗಂಧ, ಹೂವು ಮೊದಲಾದ ಪರಿಕರಗಳಿಂದ ಅಲಂಕರಿಸಿ ಪೂಜಿಸುವರು. ಇದನ್ನು ಕಾಲುಪೂಜೆ ಇಲ್ಲವೇ ಗೋಪೂಜೆ ಎಂದೇ ಕರೆಯುವರು. ಕೊಟ್ಟಿಗೆಯಲ್ಲಿನ ಎಲ್ಲ ದನಕರುಗಳನ್ನೂ ಹೂವಿನ ಹಾರ ಮೊದಲಾದ ಪರಿಕರಗಳಿಂದ ಕೂಡ ಅಲಂಕರಿಸುವರು. ಗ್ರಾಮೀಣ ಜನತೆಗೆ ದೀಪಾವಳಿಯಲ್ಲಿ ಗೋಪೂಜೆಯೇ ಮಹತ್ವದಾಗಿದೆ.
ದೈವೀಸ್ವರೂಪಳಾದ ಗೋವನ್ನು ಧನಲಕ್ಷ್ಮಿಯಾಗಿ, ಗೋಮಾತೆಯಾಗಿ, ಭಕ್ತಿಭಾವದಿಂದ ಪೂಜಿಸಿ ಕೃತಕೃತ್ಯರಾಗುವರು.

ಬಲೀಂದ್ರ ಪೂಜೆ
ಪಾಡ್ಯದ ದಿನ ಗೋಪೂಜೆಯ ನಂತರ ಭೂರೆ ಮೊಗೆಯನ್ನು ಬಲೀಂದ್ರನೆಂದು ವ್ಯವಸಾಯದ ಮುಟ್ಟುಗಳು ಹಾಗೂ ಆಯುಧ ಪರಿಕರಗಳ ಬಳಿ ಇಡುವರು. ಈ ಭೂರೆಮೊಗೆ ಹಾಹೂ ವ್ಯವಸಾಯದ ಮುಟ್ಟುಗಳಾದ ನೇಗಿಲು, ನೊಗ, ಜೊತಗ, ನಳ್ಳಿ, ಕೊರಡು, ಕುಂಟೆ, ಕಟ್ಟೆ, ಹಗ್ಗ, ಕೋವಿ, ಕತ್ತಿ, ಕೊಡಲಿ, ಹಾರೆ, ಗುದ್ದಲಿ ಮೊದಲಾದವುಗಳನ್ನು ಅಂದವಾಗಿ ಜೋಡಿಸಿ ಆಯುಧ ಪೂಜೆಯಾಗಿ ನಡೆಸುವರು. ಭೂರೆ ಮೊಗೆಯ ಮೇಲೆ ಒಂದು ತೆಂಗಿನಕಾಯಿ ಕಳಸ ಇಟ್ಟು ಬಲೀಂದ್ರನೆಂದು ಆರಾಧಿಸುವರು. ದಿಪಾವಳಿ ಬಹು ಸಂಭ್ರಮದ ಒಂದು ವಾರದ ಹಬ್ಬವಾಗಿದ್ದು,’ದೊಡ್ಡಹಬ್ಬ’ವಾಗಿದೆ.

ಹಬ್ಬಾಡುವುದು
ಹಬ್ಬಾಡುವುದು ಅಥವಾ ಅಂಟಿಕೆ ಪಿಂಟಿಕೆ
ದೀಪಾವಳಿಯ ಪಾಡ್ಯದ ಸಂಜೆ ಸೂರ ಕೆಂಬಂಣದೊಂದಿಗೆ ಅಸ್ತಮಾನಕ್ಕೆ ಎಣ್ಣೆಬತ್ತಿಯನ್ನು ಸುತ್ತಿದ ಹತ್ತಾರು ಕಡ್ಡಿಗಳನ್ನು ಹೊತ್ತಿಸಿ ದೇವಸ್ಥಾನ, ಸರಿಯುತ್ತಿದ್ದಂತೆ ಆಳುದ್ದದ ಪುಂಡಿಕೋಲಿನ ತುದಿಗೆ ಗೇಣುದ್ದದ ದೇವರಬನ, ನಾಗರಬನೆ, ಕೊಟ್ಟಿಗೆ ಬಾಗಿಲು, ಗದ್ದೆ, ತೋಟ, ಬೇಣ ಮುಂತಾದೆಡೆ ದೀಪ ಬೆಳಗುವರು, ಬಲಿಚಕ್ರವರ್ತಿಯನ್ನು ಸ್ವಾಗತಿಸುವುದಲ್ಲದೆ ಪರಲೋಕದ ತಮ್ಮ ಪಿತೃಗಳಿಗೆ ಪರಂಜ್ಯೋತಿಯ ಹಿಡಿಯುವರು,

ಬಲಿಪಾಡ್ಯಮಿ ರಾತ್ರಿಯಿಂದ ಮೂರುದಿನಗಳ ಕಾಲ ಊರಿನ ತುಂಬ ಜ್ಯೋತಿಯ ಹಿಡಿದು ಹಬ್ಬಾಡುವರು. ಅಂದು ಹಬ್ಬಾಡೋ ದೀಪವನ್ನು ಊರಿನ ದೇವಸ್ಥಾನ ಇಲ್ಲವೇ ತುಳಸಿ ಕಟ್ಟೆಯ ಬಳಿ ಹಚ್ಚಿ, ಪೂಜಿಸಿ, ಹಾಡು ಹೇಳುತ್ತಾ ಅಲ್ಲಿಂದ ಹೊರಟವರು ಮೂರುದಿನಗಳ ಕಾಲ ಅಂದರೆ ಬಲಿಪಾಡ್ಯಮಿಯಿಂದ ವರ್ಷದಡುಕದವರೆಗೆ ರಾತ್ರಿಯ ಹೊತ್ತು ಮನೆಮನೆಗೆ ಹೋಗಿ ಹಾಡು ಹೇಳುತ್ತಾ ದೀಪ ಮುಟ್ಟಿಸುವರು. ಇದನ್ನು ಹಬ್ಬಾಡುವುದು ಎನ್ನುವರು.
ತೀರ್ಥಹಳ್ಳಿಯ ಭಾಗದಲ್ಲಿ ಹಬ್ಬಾಡುವುದನ್ನು ಅಂಟಿಕೆ-ಪಿಂಟಿಕೆ ಎಂದು ಕರೆಯುವರು, ಮಳೆ, ಗಾಳಿಯಿಂದ ದೀಪವು ಕೆಡದಂತೆ ಎಚ್ಚರ ವಹಿಸುವುದು ಮುಖ್ಯ ದೀಪವು ಆಕಸ್ಮಿಕವಾಗಿ ಕೆಟ್ಟರೆ ಕೆಡುಕುಂಟಾಗುತ್ತದೆ ಎಂಬ ನಂಬಿಕೆ ಇದೆ ಹಬ್ಬಾಡುವುದು ಎಂದರೆ ದೀವಳಿಗೆಯ ಘಟನೆಯನ್ನು ನೆನೆಯುವುದು. ಅಂದರೆ ತನ್ನ ರಾಜ್ಯವ ನೋಡಲು ಬರುವ ಬಲಿಯನ್ನು ಮತ್ತು ಗೋಸಂಪತ್ತನ್ನು ಹಾಡಿನ ಮೂಲಕ ಶ್ರದ್ಧಾ, ಭಕ್ತಿಯಿಂದ ಪ್ರಸಂಶಿಸುತ್ತಾ. ದೈವೀ ಸ್ವರೂಪದ ಜ್ಯೋತಿಯನ್ನು ಮನೆಮನೆಗೆ ಮುಟ್ಟಿಸುವುದು. ಆದ್ದರಿಂದ ‘ಇದು ಹಬ್ಬವನ್ನು ಹಾಡುವುದು, ‘ಹಬ್ಬಾಡುವುದು’ ಎನ್ನುವುದೇ ಸ್ಪಷ್ಟ ಹಾಗೂ ಸಮಂಜಸವಾದುದು ಎಂದೆನಿಸುತ್ತದೆ.”