ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದ ದರ್ಶನ್ ನಟನೆಯ ಮುಂದಿನ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರತಂಡಕ್ಕೆ ಹೊಸ ಕಂಟಕ ಎದುರಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾಳೆ ಸ್ವಾತಂತ್ರ್ಯ ದಿನಾಚರಣೆಗೆ ಡೆವಿಲ್ ಸಾಂಗ್ ಬಿಡುಗಡೆಯಾಗಬೇಕಿತ್ತು. ಆದರೆ ದರ್ಶನ್ ಅರೆಸ್ಟ್ ಹಿನ್ನಲೆಯಲ್ಲಿ ಸಾಂಗ್ ಸಡಗರ ಸಪ್ಪೆಯಾಗಿಬಿಟ್ಟಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂದಿದ್ದ ಡಿ ಬಳಗಕ್ಕೆ ನೆಮ್ಮದಿ ಹಾರಿಹೋಗಿದೆ.

ಸಾಂಗ್ ವೈರಲ್ ಮಾಡಿ ಕುಣಿಯೋಕೆ ತಯಾರಾಗಿದ್ದ ದರ್ಶನ್ ಅಭಿಮಾನಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಪ್ರಕಾಶ್ ವೀರ್ ಆಕ್ಷನ್ ಕಟ್ ಹೇಳಿರೋ ಡೆವಿಲ್ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರವಾಗಿದೆ. ಬೆಂಗಳೂರು, ರಾಜಸ್ಥಾನ ಮತ್ತು ಬ್ಯಾಂಕಾಕ್ ನಲ್ಲಿ ಚಿತ್ರದ ಕಂಪ್ಲೀಟ್ ಶೂಟಿಂಗ್ ಮುಗಿದಿದ್ದು, ದರ್ಶನ್ ತಮ್ಮ ಮಾತಿನ ಭಾಗದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಪ್ರಮೋಷನ್ ಕೆಲಸಗಳಿಗೆ ಪ್ಲಾನ್ ಮಾಡಿದ್ದ ಡೆವಿಲ್ ಚಿತ್ರತಂಡದ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ದರ್ಶನ್ ಜಾಮೀನು ರದ್ದಾಗುತ್ತಿದ್ದಂತೆ ನಟಿ ಮೋಹಕತಾರೆ ರಮ್ಯಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರೋ ರಮ್ಯಾ, ನ್ಯಾಯ ಎಲ್ಲರಿಗೂ ಒಂದೇ ಎಂದು ಗುಡುಗಿದ್ದಾರೆ.

ದರ್ಶನ್ ಅಭಿಮಾನಿಗಳಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನ ಸ್ವೀಕರಿಸಿದ್ದ ರಮ್ಯಾ, ದೂರು ನೀಡಿದ್ರು. ದರ್ಶನ್ ಕೂಡ ಮೌನ ಮುರಿದು ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಾಗಿತ್ತು ಎಂದಿದ್ರು. ಇದೀಗ ‘ನ್ಯಾಯಕ್ಕಿಂತ ಯಾರು ದೊಡ್ಡವರಲ್ಲ’ ಎಂದಿದ್ದಾರೆ.

ಸದ್ಯಕ್ಕಂತೂ ಸುಪ್ರೀಂಕೋರ್ಟ್ ಮಹತ್ವದ ಆದೇಶ ದರ್ಶನ್ ಫ್ಯಾನ್ಸ್ ಗೆ ನಿರಾಸೆಯ ಕಾರ್ಮೋಡ ತಂದಿದೆ. ‘ಕಾಟೇರ’ ಬ್ಲಾಕ್ ಬಸ್ಟರ್ ಯಶಸ್ಸಿನ ಬಳಿಕ ಮತ್ತೆ ದರ್ಶನ್ ‘ಡೆವಿಲ್’ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿತಾರೆ ಎಂಬ ಜೋಷ್ ಕಡಿಮೆಯಾಗಿದೆ. ಮುಂದಿನ ಹಂತದಲ್ಲಿ ಬೇಲ್ ಗಾಗಿ ಹೋರಾಡೋ ದರ್ಶನ್, ‘ಡೆವಿಲ್’ ಅವತಾರದಲ್ಲಿ ತೆರೆಯಲ್ಲಿ ಯಾವಾಗ, ಹೇಗೆ ಕಾಣ್ತಾರೆ ಎಂಬ ಪ್ರಶ್ನೆಗಂತೂ ಸದ್ಯಕ್ಕೆ ಉತ್ತರವಿಲ್ಲ…!



















