ಸೌದಿ : ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಬೀದರ್ ಮೂಲದ ವೃದ್ದೆ ಸಾವನ್ನಪ್ಪಿದ್ದಾರೆ. ಮೃತ ರಹಮತ್ ಬಿ(80) ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ನವಂಬರ್ 9ರಂದು ಮೆಕ್ಕಾಗೆ ತೆರಳಲು, ಬೀದರ್‌ನಿಂದ ಹೈದ್ರಾಬಾದ್‌ಗೆ ರೆಹಮತ್ ಬಿ ತೆರಳಿದ್ದರು. ಹೈದ್ರಾಬಾದ್‌ನಲ್ಲಿರುವ ಸಂಬಂಧಿ ಜೊತೆಗೆ ರೆಹಮತ್ ಬಿ ಮೆಕ್ಕಾಗೆ ತೆರಳಿದ್ದರು. ಮೆಕ್ಕಾದಲ್ಲಿ 8 ದಿನ ಕಳೆದು ಮದಿನಾಗೆ ಬಸ್‌ನಲ್ಲಿ ತೆರಳುವ ವೇಳೆ ದುರಂತ ಸಂಭವಿಸಿದೆ.

ಮದಿನಾದಿಂದ 25ಕಿ.ಮೀ. ದೂರದಲ್ಲಿ ಸೋಮವಾರ ಸಂಭವಿಸಿದ್ದ ಭೀಕರ ಬಸ್ ಅಪಘಾತದಲ್ಲಿ ಭಾರತದ 42 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿಯ ಪೈಕಿ ಬೀದರ್‌ನ ರೆಹಮತ್ ಬಿ ಕೂಡ ಒಬ್ಬರು. ಸದ್ಯ ಬೀದರ್‌ನ ಮೈಲೂರು ನಗರದ ಸಿಎಮ್‌ಸಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಅಜ್ಜಿಯ ಮೃತದೇಹದ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ.
ಕರ್ನಾಟಕದ ಹಜ್ ಸಚಿವ ರಹೀಂಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಬೀದರ್ ಜಿಲ್ಲೆಯವರೇ ಹಜ್ ಸಚಿವರಿದ್ದರೂ ಇಲ್ಲಿವರೆಗೂ ನಮ್ಮ ಮನೆಗೆ ಬಂದಿಲ್ಲ, ಸಾಂತ್ವನ ಹೇಳಿಲ್ಲ. ನಮ್ಮ ಕುಟುಂಬಸ್ಥರನ್ನ ಸೌದಿ ಅರೇಬಿಯಾಗೆ ಕಳುಹಿಸಿ ಮೃತದೇಹ ತರಿಸಿಕೊಡುವ ವ್ಯವಸ್ಥೆ ಮಾಡಿಕೊಡುವಂತೆ ಕುಟುಂಬಸ್ಥರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮಂಡ್ಯ | ನಾಲೆಗೆ ಬಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಮೇಲೆತ್ತಿದ ಅರಣ್ಯ ಇಲಾಖೆ!



















