ಬೀದರ್: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಬೀದರ್ ಜಿಲ್ಲೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿಯ ಅವ್ಯವಸ್ಥೆ ಮತ್ತು ಪ್ರಯಾಣಿಕರ ಕುಂದುಕೊರತೆಯನ್ನು ವಿಚಾರಿಸಿದ್ದಾರೆ.
ಈ ವೇಳೆ ಮಹಿಳಾ ಪ್ರಯಾಣಿಕರ ಕುಂದು ಕೊರತೆಯನ್ನು ಆಲಿಸಿದ ನಾಗಲಕ್ಷ್ಮೀ ಅವರು, ಬಸ್ ನಿಲ್ದಾಣದಲ್ಲಿನ ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ, ಮಗುವಿಗೆ ಹಾಲುಣಿಸುವ ಕೇಂದ್ರಗಳನ್ನು ಪರಿಶೀಲನೆ ಮಾಡಿದ್ದಾರೆ ಹಾಗೂ ಬಸ್ ನಿಲ್ದಾಣದ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿ, ಸುರಕ್ಷತಾ ಕವಚ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.
ಇನ್ನು, ಇದೇ ಸಂಧರ್ಭದಲ್ಲಿ ಕೋಳಾರ ಗ್ರಾಮದ ಮಹಿಳೆಯೊಬ್ಬರು ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಯಾಗಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ಕಣ್ಣೀರು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಶೀಘ್ರವೇ ಪರಿಹಾರ ಒದಗಿಸಿ ಕೊಡುವಂತೆ ಸೂಚನೆ ನೀಡಿದ್ದಾರೆ.
ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ , ನಿಲ್ದಾಣಾಧಿಕಾರಿ ಐ.ಜಿ.ಬಿರಾದಾರ ಅವರನ್ನುತರಾಟೆ ತೆಗೆದುಕೊಂಡರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆ ಇಲ್ಲ, ಡಿ ದರ್ಜೆ ನೌಕರರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ ಹಾಗೂ ಅವರಿಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲಾ ಹಾಗೂ ಮಗುವಿಗೆ ಹಾಲುಣಿಸುವ ಕೇಂದ್ರದಲ್ಲಿ ತೊಟ್ಟಿಲಿಲ್ಲಎಲ್ಲಾ ಧೂಳು ಹಿಡಿದಿದೆ. ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಅದು ಚಾಲ್ತಿ ಇಲ್ಲ. ಬಸ್ ನಿಲ್ದಾಣದ ನಿರ್ವಹಣೆಗೆ ಸರ್ಕಾರದಿಂದ ಸಾಕಷ್ಟು ಹಣ ಬಂದರು ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.



















