ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಕಾರಂಜಾ ಕಾಲುವೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ತಂದೆ–ಮಗ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಹಳ್ಳಿಖೇಡ(ಬಿ) ಗ್ರಾಮದ ವಿಶ್ವನಾಥ್ ಜಮಾದಾರ್ (50) ಹಾಗೂ ಅಮರೇಶ್ (23) ಎಂದು ಗುರುತಿಸಲಾಗಿದೆ.
ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ ವಾಪಸ್ ಹಳ್ಳಿಖೇಡ(ಬಿ)ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ವೇಳೆ ಅಮರೇಶ್ ಕಾರಂಜಾ ಕಾಲುವೆಗೆ ಇಳಿದು ಕೈ–ಕಾಲು ಹಾಗೂ ಮುಖ ತೊಳೆಯುತ್ತಿದ್ದರು. ಆಗ ಆಯತಪ್ಪಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದಿದ್ದಾರೆ. ಮಗ ಕಾಲುವೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ತಂದೆ ವಿಶ್ವನಾಥ್ ಜಮಾದಾರ್ ಮಗನನ್ನು ರಕ್ಷಿಸಲು ಕಾಲುವೆಗೆ ಇಳಿದಿದ್ದಾರೆ. ಆದರೆ ದುರ್ಭಾಗ್ಯವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸಿದರು. ಬಳಿಕ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮೃತದೇಹಗಳನ್ನು ಹಳ್ಳಿಖೇಡ(ಬಿ) ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾಯಚೂರಲ್ಲಿ ಅಕ್ರಮವಾಗಿ ರಸಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿ ವಶ



















