ಮೈಸೂರು: ಕುಡಿಯಲು ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸೂರಿನ ಮಧುವನ ಬಡವಾಣೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸಿಆರ್ ಪಿಎಫ್ ನಿವೃತ್ತ ಯೋಧ ಈ ರೀತಿ ಮಾಡಿರುವ ವ್ಯಕ್ತಿ. ನಿವೃತ್ತ ಮೇಜರ್ ಎನ್. ಗುರು ಕುಡಿಯುವುದಕ್ಕಾಗಿ ಹೆಂಡತಿಯ ಬಳಿ ಹಣ ಕೇಳಿದ್ದಾರೆ. ಆದರೆ, ಪತ್ನಿ ಕುಡಿಯಲು ಹಣ ನೀಡಿಲ್ಲ. ಕುಡಿತದ ದಾಸನಾಗಿದ್ದಕ್ಕೆ ಕೋಪಗೊಂಡ ಪತ್ನಿ, ಹಣವೂ ಇಲ್ಲ, ಕುಡಿತವೂ ಇಲ್ಲ ಎಂದು ಮನೆಯೊಳಗೆ ಕೂಡಿ ಹಾಕಿದ್ದಾರೆ.
ಹೀಗಾಗಿ ಕೋಪಗೊಂಡ ಗುರು ಮನೆಯ ರೂಮ್ ನ ಹಾಸಿಗೆಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಗೆ ಮನೆಯ ತುಂಬೆಲ್ಲ ಹೊಗೆ ಆವರಿಸಿಕೊಂಡಿದೆ. ಗಾಬರಿಗೊಂಡ ಅಕ್ಕಪಕ್ಕದ ನಿವಾಸಿಗಳು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ಅಕ್ಕಪಕ್ಕದ ನಿವಾಸಿಗಳು ತುಂಬಾ ಗಾಬರಿಯಾಗಿದ್ದರು ಎನ್ನಲಾಗಿದೆ. ಸದ್ಯ ಬೆಂಕಿ ಹತೋಟಿಗೆ ಬಂದಿದೆ ಎಂದು ತಿಳಿದು ಬಂದಿದೆ.