ರಾಜಸ್ಥಾನ : ಸುಮಾರು 80 ಕೆಜಿ ತೂಕದ 8 ಅಡಿ ಉದ್ದದ ಮೊಸಳೆಯೊಂದು ಗ್ರಾಮಸ್ಥರ ಮನೆಗೆ ನುಗ್ಗಿದ್ದು, ಕುಟುಂಬವು ಭಯಭೀತರಾಗಿ ಸಹಾಯಕ್ಕಾಗಿ ಕಿರುಚಿದ್ದಾರೆ. ಸ್ಥಳೀಯ ವನ್ಯಜೀವಿ ತಜ್ಞ ಹಯಾತ್ ಖಾನ್ ಮತ್ತು ಅವರ ತಂಡ ಬಂದು ರಕ್ಷಿಸಿ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ರಾಜಸ್ಥಾನದ ಕೋಟಾದ ಇಟಾವಾ ಪ್ರದೇಶದ ಬಂಜಾರಿ ಗ್ರಾಮದಲ್ಲಿ ನಡೆದಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆದರೆ ಅಧಿಕಾರಿಗಳು ಬರುವುದು ತಡವಾದ್ದರಿಂದ ಸ್ಥಳೀಯವಾಗಿ ಜನಪ್ರಿಯರಾಗಿರುವ ಟೈಗರ್ ಎಂದೇ ಹೆಸರು ಪಡೆದಿರುವ ಸ್ಥಳೀಯ ವನ್ಯಜೀವಿ ತಜ್ಞ ಹಯಾತ್ ಖಾನ್ ಅವರ ಸಹಾಯವನ್ನು ಕೋರಿದರು. ತಕ್ಷಣ ಸ್ಥಳಕ್ಕೆ ತಲುಪಿ ಕತ್ತಲೆಯಲ್ಲಿ ಕಾರ್ಯಾಚರಣೆ ಆರಂಬಿಸಿದರು.
ಈ ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಹಯಾತ್ ಒಬ್ಬ ಸಿನಿಮಾ ಹೀರೋನಂತೆ ಆತ್ಮವಿಶ್ವಾಸದಿಂದ ನಡೆಯುವುದನ್ನು ಮತ್ತು ದೈತ್ಯ ಮೊಸಳೆಯನ್ನು ಭುಜದ ಮೇಲೆ ಇಟ್ಟುಕೊಂಡು ಬರುತ್ತಿರುವ ದೃಶ್ಯವನ್ನು ತೋರಿಸುತ್ತದೆ. ಸುರಕ್ಷತೆಗಾಗಿ, ಮೊಸಳೆಯ ಬಾಯಿ ಮತ್ತು ಕಾಲುಗಳಿಗೆ ಟೇಪ್ ಹಾಕಲಾಗಿತ್ತು. ಬೃಹತ್ ಮತ್ತು ಅಪಾಯಕಾರಿ ಜೀವಿಯನ್ನು ಸಲೀಸಾಗಿ ಹಿಡಿದುಕೊಂಡು ಕ್ಯಾಮರಾಗಳಿಗೆ ಪೋಸ್ ನೀಡುವಾಗ ಹಯಾತ್ ಅವರ ಶಾಂತ ನಗು ಎಲ್ಲರ ಗಮನ ಸೆಳೆದಿದೆ.