ಬೆಂಗಳೂರು : ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್ ರಸ್ತೆಯಲ್ಲಿ ರಾಘವೇಂದ್ರ ಬೃಂದಾವನ ಸನ್ನಿಧಿಯ ಭವ್ಯ ಮಂದಿರ ನಿರ್ಮಾಣವಾಗಲಿದ್ದು, ಇದರ ಭೂಮಿ ಪೂಜೆ ಇಂದು (ಮಾ.8) ನೆರವೇರಿದೆ.

ಅವಧಾನಿ ಶ್ರೀ ಗುಂಡಿಬೈಲು ಸುಬ್ರಮಣ್ಯ ಭಟ್ ಹಾಗೂ ಕೃಷ್ಣಮೂರ್ತಿ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳಗ್ಗೆ 11:30ಕ್ಕೆ ವೃಷಭ ಲಗ್ನದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.

1986ರಲ್ಲಿ ಹಲಸೂರಿನ ದಾಮೋದರ ಮುದಲಿಯಾರ್ ರಸ್ತೆಯಲ್ಲಿ ಶ್ರೀ ಗುರುಸೇವಾ ಮಂಡಳಿ ವತಿಯಿಂದ ರಾಘವೇಂದ್ರ ಬೃಂದಾವನ ಸನ್ನಿಧಿ ನಿರ್ಮಿಸಲಾಗಿತ್ತು. ಕಳೆದ ಸುಮಾರು 40 ವರ್ಷಗಳಲ್ಲಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ರಾಯರ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಈಗ ನೂತನ ಭವ್ಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಮಾಜಿ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಗುರುಸೇವಾ ಮಂಡಳಿಯ ಅಧ್ಯಕ್ಷ ವಿ.ಬಿ. ಗೋಪಾಲ ಕೃಷ್ಣ, ಮಂಡಳಿಯ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ರಾಯರ ಭಕ್ತರು ಉಪಸ್ಥಿತರಿದ್ದರು.



















