ನವದೆಹಲಿ: ದೇಶದ ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಎಂಬಂತೆ, ಖಾಸಗಿ ಸಂಸ್ಥೆಗಳಾದ ಓಲಾ ಮತ್ತು ಊಬರ್ ಏಕಸ್ವಾಮ್ಯಕ್ಕೆ ಬ್ರೇಕ್ ಹಾಕಲು ಸಜ್ಜಾಗಿರುವ ಸರ್ಕಾರಿ ಬೆಂಬಲಿತ ‘ಭಾರತ್ ಟ್ಯಾಕ್ಸಿ‘ ಸೇವೆಗೆ ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ಚಾಲನೆ ದೊರೆಯಲಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಈ ಹೊಸ ಆ್ಯಪ್ ಅನ್ನು ಲೋಕಾರ್ಪಣೆ ಮಾಡಲಿದ್ದು, ಇದು ಸಹಕಾರ ಮಾದರಿಯಲ್ಲಿ ಕಾರ್ಯನಿರ್ವಹಿಸುವ ದೇಶದ ಮೊದಲ ಬೃಹತ್ ಸಾರಿಗೆ ಸೇವೆಯಾಗಲಿದೆ.
ಚಾಲಕರೇ ಮಾಲೀಕರು
ಭಾರತ್ ಟ್ಯಾಕ್ಸಿಯು ಕೇವಲ ಒಂದು ಆ್ಯಪ್ ಅಲ್ಲ, ಇದೊಂದು ಸಹಕಾರ ಚಳವಳಿಯ ಭಾಗ. ‘ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್’ ವತಿಯಿಂದ ನಿರ್ವಹಿಸಲ್ಪಡುವ ಈ ವ್ಯವಸ್ಥೆಯಲ್ಲಿ ಚಾಲಕರನ್ನು ಶೋಷಣೆಯಿಂದ ಮುಕ್ತಗೊಳಿಸುವುದು ಪ್ರಮುಖ ಉದ್ದೇಶವಾಗಿದೆ. ಪ್ರತಿ ಚಾಲಕ ಅಥವಾ ‘ಸಾರಥಿ’ ಈ ಸಹಕಾರ ಸಂಘದಲ್ಲಿ ಐದು ಷೇರುಗಳನ್ನು ಹೊಂದಿರುತ್ತಾರೆ. ವಿಶ್ವದ ಯಶಸ್ವಿ ಸಹಕಾರ ಮಾದರಿಯಾದ ‘ಅಮುಲ್’ ಸಂಸ್ಥೆಯ ಮಾಜಿ ತಜ್ಞರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂಬುದು ಗಮನಾರ್ಹ ಸಂಗತಿ.
ಕಮಿಷನ್ ದಂಧೆಗೆ ಬ್ರೇಕ್: ದಿನಕ್ಕೆ ಕೇವಲ 30 ರೂಪಾಯಿ!
ಖಾಸಗಿ ಟ್ಯಾಕ್ಸಿ ಸಂಸ್ಥೆಗಳು ಪ್ರತಿ ಸವಾರಿಯಿಂದ ಶೇ.25 ರಿಂದ 30ರಷ್ಟು ಕಮಿಷನ್ ಕಡಿತಗೊಳಿಸುತ್ತವೆ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಚಾಲಕರು ಯಾವುದೇ ಕಮಿಷನ್ ನೀಡಬೇಕಿಲ್ಲ. ಬದಲಿಗೆ, ದಿನಕ್ಕೆ ಕೇವಲ 30 ರೂಪಾಯಿಗಳ ಸ್ಥಿರ ಶುಲ್ಕ ಪಾವತಿಸಿ ಆ್ಯಪ್ ಬಳಸಬಹುದಾಗಿದೆ. ಇದರಿಂದ ಚಾಲಕರ ಆದಾಯ ಹೆಚ್ಚಾಗುವುದಲ್ಲದೆ, ಪ್ರಯಾಣಿಕರಿಗೂ ಶೇ.30ರಷ್ಟು ಕಡಿಮೆ ದರದಲ್ಲಿ ಟ್ಯಾಕ್ಸಿ ಲಭ್ಯವಾಗಲಿದೆ. ಪ್ರಸ್ತುತ ಈ ವೇದಿಕೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಚಾಲಕರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಭಾರತ್ ಟ್ಯಾಕ್ಸಿ ದೆಹಲಿ ಪೊಲೀಸರೊಂದಿಗೆ ಕೈಜೋಡಿಸಿದೆ. ಗ್ರಾಹಕರ ದೂರುಗಳನ್ನು ಆಲಿಸಲು ಈಗಾಗಲೇ 35 ವಿಶೇಷ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಆ್ಯಪ್‌ನಲ್ಲಿ ಎಸಿ ಮತ್ತು ಎಸಿ ರಹಿತ ಕ್ಯಾಬ್‌ಗಳು, ಎಕ್ಸ್‌ಎಲ್ ಕ್ಯಾಬ್‌ಗಳು, ಆಟೋ ಹಾಗೂ ಬೈಕ್ ಟ್ಯಾಕ್ಸಿಗಳ ಆಯ್ಕೆಗಳಿವೆ. ಎಲ್ಲಾ ಚಾಲಕರು ಕಟ್ಟುನಿಟ್ಟಾದ ಪೊಲೀಸ್ ಪರಿಶೀಲನೆಗೆ ಒಳಪಟ್ಟಿರುತ್ತಾರೆ. ದೆಹಲಿ ಮತ್ತು ಗುಜರಾತ್‌ನಲ್ಲಿ ನಡೆದ ಪ್ರಾಯೋಗಿಕ ಹಂತದಲ್ಲಿ ಈ ಆ್ಯಪ್ ಪ್ರತಿದಿನ ಸರಾಸರಿ 5,500 ಯಶಸ್ವಿ ಸವಾರಿಗಳನ್ನು ದಾಖಲಿಸಿದೆ.
ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿರುವ ಈ ಸೇವೆ, ಶೀಘ್ರದಲ್ಲೇ ದೇಶದ ಇತರ ಪ್ರಮುಖ ನಗರಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ : 2027ರ ವಿಶ್ವಕಪ್‌ಗೆ ರೋಹಿತ್-ಕೊಹ್ಲಿ ಬೇಕೇ? ಆಯ್ಕೆಗಾರರಿಗೆ ‘ಕ್ಯಾಪ್ಟನ್ ಕೂಲ್’ ಧೋನಿ ಕೊಟ್ಟ ಸಲಹೆ ಏನು?


















