ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯವಿದ್ದು ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಜನಾರ್ದನ ರೆಡ್ಡಿ ಬೆಂಬಲಿಗರ ಮನೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ಸಿನವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬಳ್ಳಾರಿ ಘಟನಾವಳಿ, ಒಂದು ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು. ಮಾಜಿ ಸಚಿವ ಮತ್ತು ಶಾಸಕ ಜನಾರ್ದನ ರೆಡ್ಡಿ ಮುಗಿಸಲು ಕಾಂಗ್ರೆಸ್ಸಿನವರು ತೀರ್ಮಾನಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ಸಿನ ಗೂಂಡಾಗಳು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೊಸ ವರ್ಷಾಚರಣೆ ವೇಳೆ ಮುಖ್ಯಮಂತ್ರಿಗಳು ದುರ್ಘಟನೆ ನಡೆಯದಂತೆ ಪೊಲೀಸರು ನೋಡಲಿದ್ದಾರೆಂದು ಭರವಸೆಯ ಮಾತಾಡಿದ್ದಾರೆ. ಅವರು ಹೇಳಿದ ಒಂದೇ ದಿನಕ್ಕೆ ಬಳ್ಳಾರಿಯಲ್ಲಿ ಗುಂಡಿನ ದಾಳಿ ನಡೆದಿದೆ. ಇದು ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತಕ್ಕೆ ಕೈಗನ್ನಡಿ ಎಂದಿದ್ದಾರೆ.
ಒಂದೆಡೆ ಪೊಲೀಸರು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಮಾದರಿಯ ರಕ್ತ ಚರಿತ್ರೆ ಕರ್ನಾಟಕಕ್ಕೂ ಕಾಲಿಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜಕೀಯವಾಗಿ ಗುಂಡು ಹಾರಿಸುವ ಸಂಸ್ಕೃತಿ ಕರ್ನಾಟಕದಲ್ಲಿ ಇರಲಿಲ್ಲ. ಈಗ ಅದಕ್ಕೂ ನಾಂದಿ ಹಾಡಿದ್ದಾರೆ. ಜನಾರ್ದನ ರೆಡ್ಡಿ ಕಾಂಪೌಂಡ್ ಒಳಗೆ ಬಂದು ಫ್ಲೆಕ್ಸ್ ಹಾಕಿದ್ದಾರೆ. ಅದಾದ ಬಳಿಕ ಜನಾರ್ದನ ರೆಡ್ಡಿ ಮನೆಯವರು ದೂರು ನೀಡಿದ್ದಾರೆ. ಪೊಲೀಸರು ಬಂದು ತೆರವುಗೊಳಿಸಿದ್ದಾರೆ. ನಂತರ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರು ಬಂದು ರಸ್ತೆ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು ಗೇಟ್ ನುಗ್ಗಿ ಫ್ಲೆಕ್ಸ್ ಕಟ್ಟಿಸಿದ್ದಾರೆ ಎಂದು ದೂರಿದರು. ಇದರಲ್ಲಿ ಜನಾರ್ದನ ರೆಡ್ಡಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ರಕ್ತ ಚರಿತ್ರೆಯಲ್ಲೇ 2026ರ ಪ್ರಾರಂಭವಾಗಿದೆ. ಆಂಧ್ರ ಮಾದರಿಗೆ ಹೋಗುವ ಸಂದೇಶವನ್ನು ಈ ದುರುಳ ಸರಕಾರವು ಕೊಟ್ಟಿದೆ ಎಂದು ಟೀಕಿಸಿದರು. ಈ ಘಟನೆ ಆದಾಗ ಜನಾರ್ದನ ರೆಡ್ಡಿ ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.



















