ನವದೆಹಲಿ: ಭಾರತೀಯ ರಸ್ತೆಗಳಲ್ಲಿ ವಾಹನಗಳ ಸುರಕ್ಷತೆಯನ್ನು ಜಾಗತಿಕ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ‘ಭಾರತ್ ಅನ್ಕ್ಯಾಪ್ 2.0‘ (Bharat NCAP 2.0) ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ವಾಹನಗಳ ಕ್ರ್ಯಾಶ್ ಟೆಸ್ಟ್ (Crash Test) ಮತ್ತು ಸುರಕ್ಷತಾ ರೇಟಿಂಗ್‌ನಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಪ್ರಸ್ತಾಪಿಸಿದೆ.
ಐದು ಪಿಲ್ಲರ್‌ಗಳ ಆಧಾರದಲ್ಲಿ ರೇಟಿಂಗ್
ಪ್ರಸ್ತುತ ಇರುವ ಕೇವಲ ವಯಸ್ಕರು ಮತ್ತು ಮಕ್ಕಳ ಸುರಕ್ಷತೆ ಪರಿಗಣಿಸುವ ಪದ್ಧತಿಗೆ ವಿದಾಯ ಹೇಳಿ, ಹೊಸದಾಗಿ ಐದು ಪ್ರಮುಖ ಮಾನದಂಡಗಳ ಆಧಾರದಲ್ಲಿ 100 ಅಂಕಗಳಿಗೆ ರೇಟಿಂಗ್ ನೀಡಲಾಗುವುದು.

- ಕ್ರ್ಯಾಶ್ ಪ್ರೊಟೆಕ್ಷನ್ (ಅಪಘಾತ ರಕ್ಷಣೆ): 55%
- ಪಾದಚಾರಿಗಳ ರಕ್ಷಣೆ (Vulnerable Road User): 20%
- ಸುರಕ್ಷಿತ ಚಾಲನೆ (Safe Driving): 10%
- ಅಪಘಾತ ತಡೆಗಟ್ಟುವಿಕೆ (Accident Avoidance): 10%
- ಅಪಘಾತದ ನಂತರದ ಸುರಕ್ಷತೆ (Post-Crash Safety): 5%
5 ಸ್ಟಾರ್ ಬೇಕೆಂದರೆ ಇವು ಕಡ್ಡಾಯ!
ಯಾವುದೇ ವಾಹನವು ರೇಟಿಂಗ್ ಪಡೆಯಲು ಅರ್ಹವಾಗಬೇಕಾದರೆ, ಅದರಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು ಕಡ್ಡಾಯವಾಗಿ ಇರಲೇಬೇಕು. ಅಟಾನಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB) ಐಚ್ಛಿಕವಾಗಿದ್ದರೂ, ಅದು ಸ್ಕೋರ್ ಹೆಚ್ಚಿಸಲು ಸಹಕಾರಿಯಾಗಲಿದೆ. ಸೈಡ್ ಸೀಟುಗಳನ್ನು ಹೊಂದಿರುವ ವಾಹನಗಳಿಗೆ ರೇಟಿಂಗ್ ನೀಡಲಾಗುವುದಿಲ್ಲ.
ರೇಟಿಂಗ್ ಮಿತಿ ಮತ್ತಷ್ಟು ಬಿಗಿ
ಸ್ಟಾರ್ ರೇಟಿಂಗ್ ಪಡೆಯಲು ಬೇಕಾದ ಅಂಕಗಳ ಮಿತಿಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು.

- 2027–29: 5 ಸ್ಟಾರ್ ಪಡೆಯಲು 70 ಅಂಕಗಳು ಬೇಕು.
- 2029–31: 5 ಸ್ಟಾರ್ ಪಡೆಯಲು 80 ಅಂಕಗಳು ಬೇಕು.
ಅಲ್ಲದೆ, ಯಾವುದೇ ಒಂದು ವಿಭಾಗದಲ್ಲಿ ‘ಶೂನ್ಯ’ ಅಂಕ ಬಂದರೆ ಅಥವಾ ಡಮ್ಮಿಗಳಿಗೆ ಗಂಭೀರ ಗಾಯವಾದರೆ 5 ಸ್ಟಾರ್ ರೇಟಿಂಗ್ ಸಿಗುವುದಿಲ್ಲ.
ಐದು ರೀತಿಯ ಕ್ರ್ಯಾಶ್ ಟೆಸ್ಟ್‌ಗಳು
ಹಿಂದಿನ ಎರಡು ಟೆಸ್ಟ್‌ಗಳ ಬದಲಿಗೆ ಈಗ ಐದು ರೀತಿಯ ಕ್ರ್ಯಾಶ್ ಟೆಸ್ಟ್‌ಗಳನ್ನು ನಡೆಸಲಾಗುವುದು.
- 64 ಕಿ.ಮೀ ವೇಗದಲ್ಲಿ ಆಫ್‌ಸೆಟ್ ಫ್ರಂಟಲ್ ಇಂಪ್ಯಾಕ್ಟ್.
- 50 ಕಿ.ಮೀ ವೇಗದಲ್ಲಿ ಫುಲ್-ವಿಡ್ತ್ ಫ್ರಂಟಲ್ ಇಂಪ್ಯಾಕ್ಟ್.
- 50 ಕಿ.ಮೀ ವೇಗದಲ್ಲಿ ಸೈಡ್ ಇಂಪ್ಯಾಕ್ಟ್.
- 32 ಕಿ.ಮೀ ವೇಗದಲ್ಲಿ ಪೋಲ್ ಸೈಡ್ ಇಂಪ್ಯಾಕ್ಟ್.
- 50 ಕಿ.ಮೀ ವೇಗದಲ್ಲಿ ರಿಯರ್ (ಹಿಂಬದಿ) ಇಂಪ್ಯಾಕ್ಟ್.
ಪಾದಚಾರಿಗಳ ರಕ್ಷಣೆಗೂ ಆದ್ಯತೆ
ಇದೇ ಮೊದಲ ಬಾರಿಗೆ ಭಾರತದಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೂ ಅಂಕ ನೀಡಲಾಗುತ್ತಿದೆ. ಬಂಪರ್, ಬಾನೆಟ್ ಮತ್ತು ವಿಂಡ್‌ಶೀಲ್ಡ್‌ಗಳು ಪಾದಚಾರಿಗಳಿಗೆ ಡಿಕ್ಕಿ ಹೊಡೆದಾಗ ಉಂಟಾಗುವ ಗಾಯದ ತೀವ್ರತೆಯನ್ನು ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಬೇಕಾಗುತ್ತದೆ.
ಜಾರಿ ಯಾವಾಗ?
ಈ ಕರಡು ಡಿಸೆಂಬರ್ 20 ರವರೆಗೆ ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತವಾಗಿರುತ್ತದೆ. ಅಂತಿಮಗೊಂಡ ನಂತರ, ಅಕ್ಟೋಬರ್ 2027 ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದು ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಸುರಕ್ಷತೆಯ ಕ್ರಾಂತಿಗೆ ಮುನ್ನುಡಿ ಬರೆಯಲಿದೆ.
ಇದನ್ನೂ ಓದಿ: ಹೊಂಡಾ ಸಿಬಿ750 ಹಾರ್ನೆಟ್ 2026 | ಇ-ಕ್ಲಚ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ; ಭಾರತಕ್ಕೆ ಯಾವಾಗ?



















