ನವದೆಹಲಿ: ವೈವಿಧ್ಯಮಯ, ಸೃಜನಶೀಲ ವಿವಾಹ ಆಮಂತ್ರಣ ಪತ್ರಿಕೆಗಳ ಸರಣಿಗೆ ಹೊಸ ಸೇರ್ಪಡೆಯೆಂಬಂತೆ, ವಧುವೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮದುವೆಯ ಆಮಂತ್ರಣ ಪತ್ರವು ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ವಧು ಅಭಿಲಾಷಾ ಕೊತ್ವಾಲ್ ಅವರ “ಭಾರತ್ ಜೋಡೋ ವಿವಾಹ್” ಥೀಮ್‌ನ ಆಮಂತ್ರಣ ಪತ್ರ!
ಹೌದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶಾದ್ಯಂತ ಕೈಗೊಂಡಿದ್ದ ಭಾರತ್ ಜೋಡೋ ಯಾತ್ರಾವನ್ನು ಥೀಮ್ ಆಗಿಟ್ಟುಕೊಂಡು ಅಭಿಲಾಷಾ ಮತ್ತು ವಿನಲ್ ವಿಲಿಯಂ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದಾರೆ. ಇದರ ಮೂಲಕ ವಧೂ-ವರರಿಬ್ಬರೂ ತಮ್ಮ ವಿಶಿಷ್ಟ ಪ್ರಾದೇಶಿಕ ಹಿನ್ನೆಲೆಯನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಹೃದಯಸ್ಪರ್ಶಿ ಏಕತೆಯ ಸಂದೇಶವನ್ನೂ ಸಾರಿದ್ದು, ಹಲವರ ಮನಗೆದ್ದಿದೆ.

ಅಭಿಲಾಷಾ ಅವರ ಅಪ್ಪ-ಅಮ್ಮ ಜಮ್ಮು ಮತ್ತು ಪಶ್ಚಿಮ ಬಂಗಾಳಕ್ಕೆ ಸೇರಿದವರು. ಅದೇ ರೀತಿ ವಿನಲ್ ಅವರ ತಂದೆ-ತಾಯಿ ಪಂಜಾಬ್ ಮತ್ತು ಕೇರಳದವರು. ಆಮಂತ್ರಣ ಪತ್ರಿಕೆಯಲ್ಲೂ ಅಭಿಲಾಷಾ ತಮ್ಮನ್ನು ಜಮ್ಮು-ಬಂಗಾಳದ ಪುತ್ರಿಯೆಂದೂ, ವಿನಲ್ ತಮ್ಮನ್ನು ಪಂಜಾಬ್-ಕೇರಳದ ಪುತ್ರನೆಂದೂ ಉಲ್ಲೇಖಿಸಿದ್ದಾರೆ. ಈ ವಿವಾಹದ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರಿದ್ದಾರೆ.
ಟ್ವೀಟರ್ ನಲ್ಲಿ ಇನ್ವಿಟೇಷನ್ ಕಾರ್ಡ್ ಅನ್ನು ಹಂಚಿಕೊಂಡಿರುವ ಅಭಿಲಾಷಾ ಅದನ್ನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾರಿಗೂ ಟ್ಯಾಗ್ ಮಾಡಿ, “ನಮ್ಮ ವಿವಾಹವು ಸಮ್ಮಿಶ್ರ ಸರ್ಕಾರಕ್ಕಿಂತ ಹೆಚ್ಚು ವೈವಿಧ್ಯಮಯವಾಗಿದೆ. ವಿಶೇಷವೂ ಆಗಿದೆ! @RahulGandhi @priyankagandhi – ನಮ್ಮ ಪ್ರೇಮಕಥೆಯು ನೀವು ಪ್ರತಿಪಾದಿಸುವ ಮೌಲ್ಯಗಳನ್ನು ಸಾಕಾರಗೊಳಿಸುತ್ತದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ನಾವು ಹೆಮ್ಮೆಪಡುತ್ತೇವೆ!” ಎಂದು ಬರೆದುಕೊಂಡಿದ್ದಾರೆ.

ಎಲ್ಲ ರಾಜ್ಯಗಳು ಮತ್ತು ಎಲ್ಲ ಸಂಸ್ಕೃತಿಗಳನ್ನೂ ಒಳಗೊಂಡಂತೆ ಭಾರತೀಯರನ್ನು ಒಟ್ಟುಗೂಡಿಸುವ ಉದ್ದೇಶದೊಂದಿಗೆ ದೇಶಾದ್ಯಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ಪ್ರೇರಿತವಾದ ಈ ವಿವಾಹ ಆಮಂತ್ರಣವು ಭಾರತ್ ಜೋಡೋ ಯಾತ್ರೆಯ ಪೋಸ್ಟರ್‌ಗಳನ್ನೇ ಹೋಲುತ್ತದೆ. ಆ ಪೋಸ್ಟರ್ ಮಾದರಿಯ ಬಣ್ಣಗಳು ಮತ್ತು ವಿನ್ಯಾಸಗಳನ್ನೇ ಬಳಸಿಕೊಂಡು ಇದನ್ನು ಸಿದ್ಧಪಡಿಸಲಾಗಿದೆ.
ಇದರ ಜೊತೆಗೆ ಅಭಿಲಾಷಾ ಅವರು ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರನ್ನೂ ತಮ್ಮ ವಿವಾಹಕ್ಕೆ ಆಮಂತ್ರಿಸಿದ್ದಾರೆ. ಇದು ಕೇವಲ ಸಾಂಕೇತಿಕವಲ್ಲ, ಇದರಲ್ಲಿ ಒಂದು ಅನನ್ಯ ನಂಟಿದೆ. ಒಂದು ಕಾಲದಲ್ಲಿ ಅಭಿಲಾಷಾ ಅವರ ತಾಯಿಯೇ ಪ್ರಿಯಾಂಕಾ ಗಾಂಧಿ ಅವರ ವಿವಾಹ ಆಮಂತ್ರಣವನ್ನು ವಿನ್ಯಾಸಗೊಳಿಸಿದ್ದರು. ಅಲ್ಲದೆ, ಅವರೇ ಸ್ವತಃ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸಕ್ಕೆ ಹೋಗಿ ಆಹ್ವಾನ ಪತ್ರಿಕೆಯನ್ನು ಅವರ ಕೈಗೆತ್ತಿದ್ದರು ಎಂಬ ವಿಚಾರವನ್ನೂ ಅಭಿಲಾಷಾ ಬಹಿರಂಗಪಡಿಸಿದ್ದಾರೆ.
ಈಗ ವೈರಲ್ ಆಗುತ್ತಿರುವ ಈ ಆಹ್ವಾನ ಪತ್ರಿಕೆಗೆ ಸಾಮಾಜಿಕ ಮಾಧ್ಯಮಗಳನ್ನು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಏಕತೆ ಹಾಗೂ ವೈವಿಧ್ಯತೆಯ ಸುಂದರ ಸಂಕೇತ ಎಂದು ಹೊಗಳಿದರೆ, ಕೆಲವರು ಹಾಸ್ಯಾಸ್ಪದವಾಗಿಯೂ ಪ್ರತಿಕ್ರಿಯಿಸಿದ್ದಾರೆ.