ನವದೆಹಲಿ: ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು” ವಿರೋಧಿಸಿ ಬುಧವಾರ ಭಾರತ್ ಬಂದ್ ನಡೆಯಲು ಕಾರ್ಮಿಕರು ಸಜ್ಜಾಗಿದ್ದಾರೆ. ದೇಶಾದ್ಯಂತದ ಬ್ಯಾಂಕಿಂಗ್, ವಿಮೆ, ಅಂಚೆ ಸೇವೆಗಳು ಮತ್ತು ಕಲ್ಲಿದ್ದಲು ಗಣಿಗಾರಿಕೆಯಂತಹ ವಿವಿಧ ವಲಯಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 10 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಈ ಮುಷ್ಕರಕ್ಕೆ ಕರೆ ನೀಡಿದೆ.
ದೇಶವ್ಯಾಪಿ ಮುಷ್ಕರಕ್ಕೆ ವ್ಯಾಪಕ ಸಿದ್ಧತೆ
ಕಾರ್ಮಿಕ ಸಂಘಟನೆಗಳು “ದೇಶವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸುವಂತೆ” ಕರೆ ನೀಡಿವೆ. ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಈ ಮುಷ್ಕರಕ್ಕಾಗಿ ತಿಂಗಳುಗಟ್ಟಲೆ ವ್ಯಾಪಕ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ. “25 ಕೋಟಿಗೂ ಹೆಚ್ಚು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ದೇಶಾದ್ಯಂತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ನ ಅಮರ್ಜೀತ್ ಕೌರ್ ತಿಳಿಸಿದ್ದಾರೆ.
ಈ ವ್ಯಾಪಕ ಪ್ರತಿಭಟನೆಯು ಪ್ರಮುಖ ಸಾರ್ವಜನಿಕ ಸೇವೆಗಳು ಮತ್ತು ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. “ಬ್ಯಾಂಕಿಂಗ್, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು ಮತ್ತು ರಾಜ್ಯ ಸಾರಿಗೆ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ” ಎಂದು ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಿಧು ಹೇಳಿದರು.
ಬೇಡಿಕೆಗಳ ನಿರ್ಲಕ್ಷ್ಯವೇ ಪ್ರತಿಭಟನೆಗೆ ಕಾರಣ
ಕಾರ್ಮಿಕ ಸಂಘಟನೆಗಳು ಕಳೆದ ವರ್ಷ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ 17 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿತ್ತು. ಆದರೆ, ಇದರಲ್ಲಿ ಯಾವ ಬೇಡಿಕೆಯನ್ನೂ ಸರ್ಕಾರ ಈಡೇರಿಸಿಲ್ಲ ಎನ್ನುವುದು ಸಂಘಟನೆಗಳ ವಾದವಾಗಿದೆ. ಸರ್ಕಾರವು ಈ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಮತ್ತು ಕಳೆದ 10 ವರ್ಷಗಳಲ್ಲಿ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ನಡೆಸಲೂ ವಿಫಲವಾಗಿದೆ. ಇದು ಕಾರ್ಮಿಕರ ಬಗ್ಗೆ ಸರ್ಕಾರದ ಉದಾಸೀನತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಂಘಟನೆಗಳು ಆರೋಪಿಸಿವೆ.
ಸರ್ಕಾರವು ಪರಿಚಯಿಸಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಸೇರಿದಂತೆ ಕಾರ್ಮಿಕ ಸುಧಾರಣೆಗಳು ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ ಎಂದು ವೇದಿಕೆಯು ಆರೋಪಿಸಿದೆ. ಈ ಕಾರ್ಮಿಕ ಸಂಘಗಳ ಚಟುವಟಿಕೆಗಳನ್ನು ದುರ್ಬಲಗೊಳಿಸಲು, ಕೆಲಸದ ಸಮಯವನ್ನು ಹೆಚ್ಚಿಸಲು ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆಯಿಂದ ಉದ್ಯೋಗದಾತರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎನ್ನುವುದು ಸಂಘಟನೆಗಳ ವಾದವಾಗಿವೆ.
“ಸರ್ಕಾರವು ದೇಶದ ಕಲ್ಯಾಣ ರಾಜ್ಯದ ಸ್ಥಾನಮಾನವನ್ನು ಕೈಬಿಟ್ಟಿದೆ ಮತ್ತು ವಿದೇಶಿ ಹಾಗೂ ಭಾರತೀಯ ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ, ಸರ್ಕಾರದ ನೀತಿಗಳಿಂದ ಅದು ಸ್ಪಷ್ಟವಾಗುತ್ತಿದೆ” ಎಂದೂ ವೇದಿಕೆ ಹೇಳಿದೆ. ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ, ಹೊರಗುತ್ತಿಗೆ, ಗುತ್ತಿಗೆ ನೀತಿಗಳ ವಿರುದ್ಧ ಕಾರ್ಮಿಕ ಸಂಘಗಳು ಹೋರಾಡುತ್ತಿವೆ” ಎಂದು ಅದು ಹೇಳಿದೆ.
ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ಸಂಘಗಳ ಚಳುವಳಿಯನ್ನು ಹತ್ತಿಕ್ಕಲು, ಕೆಲಸದ ಸಮಯವನ್ನು ಹೆಚ್ಚಿಸಲು, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು, ಮುಷ್ಕರದ ಹಕ್ಕನ್ನು ಕಸಿದುಕೊಳ್ಳಲು ಮತ್ತು ಉದ್ಯೋಗದಾತರಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ಅಪರಾಧಮುಕ್ತಗೊಳಿಸಲು ಉದ್ದೇಶಿಸಿವೆ ಎಂದೂ ಆರೋಪಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೃಷಿ ಕಾರ್ಮಿಕರ ಸಂಘಗಳ ಜಂಟಿ ರಂಗವು ಈ ಮುಷ್ಕರಕ್ಕೆ ಬೆಂಬಲ ನೀಡಿದೆ. ಗ್ರಾಮೀಣ ಭಾರತದಲ್ಲಿ ಬೃಹತ್ ಜನಸಮೂಹವನ್ನು ಸಜ್ಜುಗೊಳಿಸಲು ನಿರ್ಧರಿಸಿದೆ ಎಂದು ಯೂನಿಯನ್ ನಾಯಕರು ಹೇಳಿದ್ದಾರೆ.