ಶಿವಮೊಗ್ಗ : ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನದ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿಕೆ
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ, ಈ ಘಟನೆ ಇಲಾಖೆಯ ಗಮನಕ್ಕೆ ಬಂದಿದೆ. ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಲಾಗುತ್ತದೆ. ಸಂಬಂಧಪಟ್ಟ ಠಾಣೆಯ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಭದ್ರಾವತಿ ನಗರದಲ್ಲಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಘೋಷಣೆ ಕೂಗಲಾಗಿದೆ ಎಂಬ ವಿಡಿಯೊ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಪರಿಶೀಲನೆಗೆ ಮೂರು ತಂಡ ರಚಿಸಲಾಗಿದೆ. ಈಗಾಗಲೇ ಆ ತಂಡಗಳು ಕಾರ್ಯಪ್ರವೃತ್ತವಾಗಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚುವ ಕೆಲಸ ಆರಂಭವಾಗಿದೆ. ಮೆರವಣಿಗೆ ವೇಳೆ ಇಲಾಖೆ ವಿಡಿಯೊಗ್ರಾಫರ್, ವಾಯ್ಸ್ ಆಧಾರಿತ ಸಿಸಿ ಕ್ಯಾಮೆರಾ ಮತ್ತಿತರ ಕಡೆಗಳಿಂದ ಫೂಟೇಜ್ ಗಳನ್ನು ಪಡೆಯಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಎಫ್ಎಸ್ಎಲ್ ಅಧ್ಯಯನಕ್ಕಾಗಿ ಕಳಿಸಲಾಗುತ್ತದೆ. ತನಿಖೆ ನಂತರ ಸತ್ಯಾಂಶ ಏನೆಂಬುದು ತಿಳಿಯಲಿದೆ ಎಂದು ಹೇಳಿದ್ದಾರೆ.