ಇತ್ತೀಚಿನ ದಿನಗಳಲ್ಲಿ ಮದುವೆ ಆಗುವ ಮುನ್ನ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸುವುದು ಟ್ರೆಂಡಿಂಗ್ ಆಗಿ ಬಿಟ್ಟಿದೆ. ರಸ್ತೆ, ಪಾರ್ಕ್, ದೇವಸ್ಥಾನ ಹೀಗೆ ಸಿಕ್ಕ ಸಿಕ್ಕ ಪ್ರದೇಶಗಳಲ್ಲಿ ಕಪಲ್ಸ್ ಫೋಟೋಗೆ ಪೋಸ್ ಕೊಟ್ಟು ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇಂತಹ ಕಪಲ್ಸ್ ಗೆ ಈಗ ಶಾಕ್ ಎದುರಾಗಿದೆ.
ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಹಲವು ಪ್ರದೇಶಗಳಲ್ಲಿ ಜನರಿಗೆ ಕಿರಿಕಿರಿಯಾಗುತ್ತಿರುತ್ತದೆ. ಹೀಗಾಗಿ ಕೆಲವು ದೇವಸ್ಥಾನಗಳಲ್ಲಿ ಫೋಟೋ ಶೂಟ್ ಬ್ಯಾನ್ ಮಾಡಲಾಗಿದೆ. ಉಡುಪಿ ಶ್ರೀಕೃಷ್ಣ ಮಠ ಈ ಕುರಿತು ಮಹತ್ವದ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಕೃಷ್ಣಮಠದ ರಥಬೀದಿಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋ ನಿಷೇಧಿಸಿ ಪರ್ಯಾಯ ಸುತ್ತಿಗೆ ಮಠ ನಿರ್ಧಾರ ಪ್ರಕಟಿಸಿದೆ.
ಬೆಳ್ಳಂಬೆಳಿಗ್ಗೆ ಹಾಗೂ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಮಠವು ಈ ಕ್ರಮವನ್ನು ಕೈಗೊಂಡಿದೆ. ವಿವಿಧ ಊರುಗಳಿಂದ ಬರುವ ಫೋಟೋಗ್ರಾಫರ್‌ಗಳು, ಜೋಡಿಗಳು ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಸಲ್ಲಾಪ ಮಾಡುತ್ತಾರೆ. ಇದು ವಿರೋಧಭಾಸವಾಗಿ ಕಾಣಿಸುತ್ತಿದೆ. ಒಂದೆಡೆ ಧಾರ್ಮಿಕ ಪ್ರಜ್ಞೆ ವೃದ್ಧಿಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತದ್ವಿರುದ್ಧವಾದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಮಂದಿರದ ಆಡಳಿತ ಮಂಡಳಿ ಈ ಕುರಿತು ತೀರ್ಮಾನ ಕೈಗೊಂಡಿದೆ.



















