ಬೆಂಗಳೂರು: ರೌಡಿ ಶೀಟರ್ ಅಂದ್ರೆ ಜನರಿಗೆ ಭಯ ಇದ್ದೆ ಇರುತ್ತದೆ. ಯಾಕಪ್ಪ ಅವರ ಸಹವಾಸ ದೂರ ಇರೋಣ ಅಂದುಕೊಳ್ಳುತ್ತಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಸಾಮಿಗಳು ರೌಡಿಗಳ ಪರಿಚಯ ಇಲ್ಲದಿದ್ದರೂ ಅವರ ಫೋಟೋ ಬಳಕೆ ಮಾಡಿ ಬಡ್ಡಿ ವಸೂಲಿ ಮಾಡಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಸೈಲೆಂಟ್ ಸುನೀಲ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದ ಆಸಾಮಿಗಳು ಲಕ್ಷ ಲಕ್ಷ ವಸೂಲಿ ಮಾಡಿದ್ದಾರೆ. ಹೀಗೆ ಫೋಟೋ ತೋರಿಸಿ ವ್ಯಕ್ತಿಯೊಬ್ಬರಿಗೆ ಧಮ್ಕಿ ಹಾಕಿರುವ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಕ್ಕ ಸಂದ್ರದ ರವಿ ಎಂಬ ವ್ಯಕ್ತಿ ಪರಿಚಯಸ್ಥ ದೀಪಕ್ ಬಳಿ 13 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಒಂದು ತಿಂಗಳ ನಂತರ 13 ಲಕ್ಷಕ್ಕೆ 13 ಲಕ್ಷ ಅಂದ್ರೆ 26 ಲಕ್ಷ ಕೊಡುವಂತೆ ಅಗ್ರಿಮೆಂಟ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದನ್ನು ಕೊಡಲು ಸಾಧ್ಯವಾಗದಿದ್ದಾಗ 26 ಲಕ್ಷ ರೂ. ಗೆ ಬಡ್ಡಿ ದರದಲ್ಲಿ 63 ಲಕ್ಷ ರೂ. ವಸೂಲಿ ಮಾಡಿದ್ದಾರೆ.
ದೀಪಕ್ ಅಷ್ಟೇ ಅಲ್ಲದೆ ದೀಪಕ್ ಸ್ನೇಹಿತ ಜಯ್ ಎನ್ನುವವನ ಬಳಿ ರವಿ 8 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಇದಕ್ಕಾಗಿ 6.4 ಲಕ್ಷ ರೂ. ಬಡ್ಡಿ ಕಟ್ಟಿದ್ದರು. ಆದರೂ ಸುಮ್ಮನಾಗ ವ್ಯಕ್ತಿ ಮತ್ತಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಕೊಡದಿದ್ದಾಗ ಸೈಲೆಂಟ್ ಸುನೀಲ್ ನನಗೆ ಗೊತ್ತು ಅಂತ ಸುನೀಲ್ ಜೊತೆಗಿನ ಫೋಟೋ ಕಳುಹಿಸಿ ಧಮ್ಕಿ ಹಾಕಿದ್ದಾರೆ.
ದರೊಂದಿಗೆ ಪ್ರಕಾಶ್ ನಗರದ ವಿಜಿ, ಪುರುಷೋತ್ತಮ್ ಹೆಸರು ಹೇಳಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಹಣ ಕೊಡದಿದ್ದಾಗ ರವಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿ ನಾಲ್ಕು ಕೋಟಿ ಹಣ ನೀಡಬೇಕು ಎಂದು ಹೆದರಿಸಿದ್ದಾರೆ. ಆ ಬಗ್ಗೆ ಅಗ್ರಿಮೆಂಟ್ ಗೆ ಸಹಿ ಹಾಕಿಸಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ರವಿ ಸಿಸಿಬಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದೀಪಕ್ ಹಾಗೂ ಜಯ್ ನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸೈಲೆಂಟ್ ಸುನೀಲ್ ಆರೋಪಿಗಳಿಗೆ ಪರಿಚಯ ಇಲ್ಲ ಎನ್ನುವುದು ಬೆಳಕಿಗೆ ಬಂದಿದೆ.