ಗ್ಯಾರಂಟಿ ಯೋಜನೆ ಜಾರಿಗೆ ತಂದಾಗಿನಿಂದ ನನ್ನನ್ನು ಮುಗಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ, ಅದು ಎಚ್.ಡಿ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ತಾಲೂಕಿನ ಕವಲಗಿ (ಕೆ) ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೋಳ್ಳಿ ರಾಯಣ್ಣನನ್ನು ಹಿಡಿದು ಕೊಟ್ಟವರೇ ನಮ್ಮವರು. ಇಂತಹ ಮನೆ ಮುರುಕು ಜನ ಹಿಂದೆಯೂ ನಮ್ಮ ಸಮಾಜದಲ್ಲಿ ಇದ್ದರು. ಈಗಲೂ ಇದ್ದಾರೆ. ಅಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂಥವರು ನಮ್ಮ ಮಧ್ಯೆ ಇದ್ದಿದ್ದಕ್ಕೆ ನಾವು 200 ವರ್ಷ ಬ್ರಿಟಿಷರ ಗುಲಾಮಗಿರಿ ಅನುಭವಿಸುವಂತಾಯಿತು ಎಂದು ಶತೃಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಡವರಿಗಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಕ್ಕೆ ಪಟ್ಟಭದ್ರರು ಷಡ್ಯಂತ್ರ ನಡೆಸುತ್ತಿದ್ದಾರೆ. ನಾನು 40 ವರ್ಷಗಳಿಂದಲೂ ನನ್ನ ರಾಜಕೀಯ ಜೀವನದಲ್ಲಿ ಒಂದು ಸಣ್ಣ ತಪ್ಪು ಮಾಡಿಲ್ಲ. ಈಗ ಮಾಡಲು ಸಾಧ್ಯವೇ ಇಲ್ಲ. ಹಿಂದೆಯೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಆದರೂ ಬಿಜೆಪಿ, ಜೆಡಿಎಸ್ ಸೇರಿಕೊಂಡು ದೆಹಲಿಯಿಂದ ರಾಜಭವನದವರೆಗೂ ಪಿತೂರಿ ಮಾಡಲಾಗುತ್ತಿದೆ. ಸಂಗೊಳ್ಳಿ ರಾಯಣ್ಣನ ಹೋರಾಟದ ಕಿಚ್ಚು ನಮ್ಮೊಳಗಿದೆ. ಅವರ ಷಡ್ಯಂತ್ರ ನಾಶ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ನಾನು ಹಿಂದುಳಿದ ಸಮಾಜದಲ್ಲಿ ಜನಿಸಿ ಬಡತನ ಅಂದರೆ ಏನು, ಗ್ರಾಮಗಳ ಸ್ಥಿತಿ ಹೇಗಿದೆ ಎಂಬುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಬಡವರಿಗಾಗಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದೇನೆ. ಡಾ. ಬಾಬಾ ಸಾಹೇಬ್ ಅವರ ಸಂವಿಧಾನ ನಂಬಿದ್ದಕ್ಕಾಗಿ ನಾನು ಸಿಎಂ ಆಗಿದ್ದೇನೆ. ಎಲ್ಲ ಜಾತಿ, ಜನ ವರ್ಗಗಳಿಗೆ, ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.