ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಬಿಸಿಸಿಐ ಹಲವು ಹೊಸ ನಿಯಮಗಳನ್ನು ಘೋಷಿಸಿದೆ.
ಹರಾಜಿಗೂ ಮುನ್ನ 5+1 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಂದರೆ ಇಲ್ಲಿ ಐವರು ಆಟಗಾರರನ್ನು ನೇರವಾಗಿ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಿದರೆ, ಓರ್ವನ ಮೇಲೆ ಆರ್ ಟಿಎಂ ಆಯ್ಕೆ ಬಳಸಿಕೊಳ್ಳಲು ಸೂಚಿಸಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಐಪಿಎಲ್ ಫ್ರಾಂಚೈಸಿಗಳು ಮುಂದಿಟ್ಟಿದ್ದ ಮತ್ತೊಂದು ಬಹುಕಾಲದ ಬೇಡಿಕೆಗೂ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.
ಐಪಿಎಲ್ ಗೆ ಆಯ್ಕೆಯಾಗಿ ನಂತರ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಕೆಲ ಫ್ರಾಂಚೈಸಿಗಳು ಮನವಿ ಸಲ್ಲಿಸಿದ್ದವು. ಕೆಲವರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಆಗ್ರಹಿಸಿದ್ದವು.
ಗಾಯದ ಅಥವಾ ನಿರ್ದಿಷ್ಟ ಕಾರಣದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್ ನಿಂದ ಹಿಂದೆ ಸರಿದರೆ, ಆ ಆಟಗಾರನ ಮೇಲೆ 2 ವರ್ಷಗಳವರೆಗೆ ನಿಷೇಧ ಹೇರುವ ನಿಯಮವನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಹರಾಜಾದ ಆಟಗಾರರು ಕಡ್ಡಾಯವಾಗಿ ಐಪಿಎಲ್ ಆಡಬೇಕು.
ವಿದೇಶಿ ಆಟಗಾರರ ಇಂತಹ ನಡೆಗಳಿಂದ ಬೆಸತ್ತಿರುವ ಫ್ರಾಂಚೈಸಿಗಳು ಇದೀಗ ಕಠಿಣ ನಿಯಮವನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದವು. ಅದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಐಪಿಎಲ್ ತಂಡಗಳಿಗೆ ಆಯ್ಕೆಯಾಗಿ ಟೂರ್ನಿಯಿಂದ ಹಿಂದೆ ಸರಿದರೆ, ಮುಂದಿನ 2 ವರ್ಷಗಳವರೆಗೆ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ ಇನ್ನು ಮುಂದೆ ವಿದೇಶಿ ಆಟಗಾರರು ಸುಖಾಸುಮ್ಮನೆ ಟೂರ್ನಿಯಿಂದ ಹಿಂದೆ ಸರಿಯುವಂತಿಲ್ಲ.