ಇಸ್ಲಾಮಾಬಾದ್ : ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ಟಿ20 ವಿಶ್ವಕಪ್ 2026ರ ಪಂದ್ಯಗಳ ನಡುವೆಯೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಆಲ್‌ರೌಂಡರ್ ಶದಬ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಫ್ರಿದಿ ಅವರು ಶದಬ್‌ಗೆ “ಬರಿ ಸಣ್ಣ ತಂಡಗಳ ವಿರುದ್ಧ ಆಡುವುದಲ್ಲ, ದೊಡ್ಡ ಪಂದ್ಯಗಳಲ್ಲಿ ಪರ್ಫಾರ್ಮೆನ್ಸ್ ಮಾಡಿ ತೋರಿಸಿ” ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.
ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪ್ರಸ್ತುತ ತಂಡದ ಆಟಗಾರರನ್ನು ಕಟುವಾಗಿ ಟೀಕಿಸಿದ್ದರು. ಇದಕ್ಕೆ ನಮೀಬಿಯಾ ವಿರುದ್ಧದ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದ ಶದಬ್ ಖಾನ್, “ಮಾಜಿ ಕ್ರಿಕೆಟಿಗರು ದೊಡ್ಡ ಸಾಧನೆ ಮಾಡಿರಬಹುದು, ಆದರೆ ನಮ್ಮ ತಲೆಮಾರಿನ ಆಟಗಾರರು 2021ರ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದೆವು. ಟೀಕೆ ಮಾಡುವುದು ಸುಲಭ,” ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದರು.
ಅಫ್ರಿದಿ ನೀಡಿದ ‘ಬ್ರೂಟಲ್’ ನೆನಪೋಲೆ
ಶದಬ್ ಅವರ ಈ ಹೇಳಿಕೆಗೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ ಅಫ್ರಿದಿ, ಅತ್ಯಂತ ಕಟು ಶಬ್ದಗಳಲ್ಲಿ ಉತ್ತರ ನೀಡಿದ್ದಾರೆ. “ಶದಬ್ ಅವರ ಮಾತು ನಿಜ, ಅವರು 2021ರಲ್ಲಿ ಭಾರತವನ್ನು ಸೋಲಿಸಿದರು. ಆದರೆ ಆ ಗೆಲುವಿನಿಂದ ಬಂದ ಗೌರವವನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಗೆದ್ದ ಮೇಲೆ ತಂಡದಲ್ಲಿ ಆಂತರಿಕ ಸಮಸ್ಯೆಗಳು ಶುರುವಾದವು. ಒಬ್ಬ ವ್ಯಕ್ತಿಯಾಗಿ ಅಥವಾ ತಂಡವಾಗಿ ಆ ಯಶಸ್ಸನ್ನು ನಿಭಾಯಿಸುವಲ್ಲಿ ನೀವು ವಿಫಲರಾಗಿದ್ದೀರಿ,” ಎಂದು ಅಫ್ರಿದಿ ಕುಟುಕಿದ್ದಾರೆ.
ನಮೀಬಿಯಾ ವಿರುದ್ಧ ಆಡಿದ್ದನ್ನು ದೊಡ್ಡದು ಮಾಡಬೇಡಿ
ನಮೀಬಿಯಾ ವಿರುದ್ಧ ಶದಬ್ ಖಾನ್ 36 ರನ್ ಗಳಿಸಿ 3 ವಿಕೆಟ್ ಪಡೆದಿದ್ದನ್ನು ಉಲ್ಲೇಖಿಸಿದ ಅಫ್ರಿದಿ, “ಶದಬ್ ಮಗನೇ (Beta), ನೀನು ನಮೀಬಿಯಾ ವಿರುದ್ಧ ಚೆನ್ನಾಗಿ ಆಡಿದ್ದೀಯಾ ಸರಿ. ಆದರೆ ಈಗ ನ್ಯೂಜಿಲೆಂಡ್ ವಿರುದ್ಧ ಆಡಿ ತೋರಿಸು. ನಾವು ಕ್ರಿಕೆಟ್ ಆಡುವಾಗ ನಮ್ಮನ್ನೂ ಮಾಜಿ ಆಟಗಾರರು ಬೈಯುತ್ತಿದ್ದರು, ಶಪಿಸುತ್ತಿದ್ದರು. ಆದರೆ ನಾವು ಮಾತಿನಿಂದ ಉತ್ತರಿಸುತ್ತಿರಲಿಲ್ಲ, ಮೈದಾನದಲ್ಲಿ ದೊಡ್ಡ ತಂಡಗಳ ವಿರುದ್ಧ ರನ್ ಹರಿಸುವ ಮೂಲಕ ಉತ್ತರಿಸುತ್ತಿದ್ದೆವು. ನೀವೂ ಅದನ್ನೇ ಮಾಡಿ,” ಎಂದು ಎಚ್ಚರಿಸಿದ್ದಾರೆ.
ಕಷ್ಟದ ಕಾಲದಲ್ಲಿ ಬೆಂಬಲಿಸಿದ್ದನ್ನು ಮರೆಯಬೇಡಿ
ಶದಬ್ ಖಾನ್ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಬೀಳುವ ಹಂತದಲ್ಲಿದ್ದಾಗ ನಾವು ಟಿವಿಯಲ್ಲಿ ಕುಳಿತು ಅವರಿಗೆ ಬೆಂಬಲ ನೀಡಿದ್ದೆವು ಎಂಬುದನ್ನು ಅಫ್ರಿದಿ ನೆನಪಿಸಿದ್ದಾರೆ. “ಶದಬ್ ಈ ತಂಡದ ಬೆನ್ನೆಲುಬು ಎಂದು ನಾವೇ ಹೇಳಿದ್ದೆವು. ನೀವು ಡೊಮೆಸ್ಟಿಕ್ ಕ್ರಿಕೆಟ್ ಆಡದಿದ್ದರೂ ತಂಡಕ್ಕೆ ಸೇರಿಸಿಕೊಂಡಿದ್ದನ್ನು ನಾವು ಬೆಂಬಲಿಸಿದ್ದೆವು. ಈಗ ನೀವು ನಮಗೆ ಉತ್ತರಿಸಬೇಕೆಂದರೆ ಅದು ಮೈದಾನದ ಪ್ರದರ್ಶನದ ಮೂಲಕ ಮಾತ್ರ ಸಾಧ್ಯ. ಒಮ್ಮೆ ನೀವು ವಿಶ್ವಕಪ್ ಗೆದ್ದು ತೋರಿಸಿ, ನಾವೇ ಸುಮ್ಮನಾಗುತ್ತೇವೆ,” ಎಂದು ಅಫ್ರಿದಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : IDBI ಬ್ಯಾಂಕ್‌ನಿಂದ ಹೂಡಿಕೆ ಪ್ಲಸ್ ಆರೋಗ್ಯ ವಿಮೆ ಯೋಜನೆ ಘೋಷಣೆ | ಏನಿದರ ಲಾಭ?



















