ಬೆಂಗಳೂರು: ಬಿಲ್ ಕಟ್ಟದ ಕಂದಾಯ ಭವನಕ್ಕೆ ಬೆಸ್ಕಾಂ ಬಿಸಿ ಮುಟ್ಟಿಸಿರುವ ಘಟನೆ ನಡೆದಿದೆ.
ವಿದ್ಯುತ್ ಬಿಲ್ ಕಟ್ಟದಿದ್ದಕ್ಕೆ ಕಂದಾಯ ಭವನದ ಕರೆಂಟ್ ಕಟ್ ಮಾಡಲಾಗಿದೆ. ಇದನ್ನು ನೋಡಿ ಸಾರ್ವಜನಿಕರು ಗೇಲಿ ಮಾಡುತ್ತಿದ್ದಾರೆ. ಸರ್ಕಾರಿ ಕಟ್ಟಡದ ವಿದ್ಯುತ್ ಬಿಲ್ ಕಟ್ಟಲು ಕೂಡ ಆಗದಷ್ಟು ಬಡವಾಯಿತಾ ಸರ್ಕಾರ ಎಂದು ಪ್ರಶ್ನಿಸುತ್ತಿದ್ದಾರೆ.
ಕಳೆದ 5 ತಿಂಗಳಿಂದಲೂ ಕಂದಾಯ ಭವನದ ವಿದ್ಯುತ್ ಬಿಲ್ ನ್ನು ಸರ್ಕಾರ ಕಟ್ಟಿಲ್ಲ. ಸುಮಾರು 20 ಲಕ್ಷ ರೂ. ವಿದ್ಯುತ್ ಬಿಲ್ ಪೆಂಡಿಂಗ್ ಇದೆ. ಹೀಗಾಗಿ ಬೆಸ್ಕಾಂ ಗುರುವಾರ ಎರಡ್ಮೂರು ಗಂಟೆಗಳ ಕಾಲ ಪವರ್ ಸಪ್ಲೈ ಬಂದ್ ಮಾಡಿತ್ತು.
ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದ ಕರೆಂಟ್ ಕಟ್ ಮಾಡಲಾಗಿತ್ತು. ಈ ಕಂದಾಯ ಭವನದಲ್ಲಿ ಸುಮಾರು 15ಕ್ಕೂ ಅಧಿಕ ಸರ್ಕಾರಿ ಕಚೇರಿಗಳಿವೆ. ಕರೆಂಟ್ ಕಟ್ ಮಾಡಿದ್ದರಿಂದಾಗಿ ತಹಸೀಲ್ದಾರ್ ಕಚೇರಿ, ನೋಂದಣಿ ಕಚೇರಿಗೆ ಬಂದಿದ್ದ ಸಾರ್ವಜನಿಕರು ಕಾದು ಕಾದು ಮರಳಿ ಹೋಗುವಂತಾಗಿತ್ತು. ಹೀಗಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕಿ ಜನರು ಮರಳಿದರು.
ಕರೆಂಟ್ ಇಲ್ಲದಿದ್ದಕ್ಕೆ ಕಂದಾಯ ಭವನ ಬಣ ಬಣ ಎನ್ನುತ್ತಿತ್ತು. ಆಫೀಸ್ ಒಳಗಡೆ ಟಾರ್ಚ್ ಹಾಕಿಕೊಂಡು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಈಗ ಬಿಲ್ ತುಂಬಿ ಕರೆಂಟ್ ಪಡೆಯುವಂತೆ ಸರ್ಕಾರಕ್ಕೆ ಸಾರ್ವಜನಿಕರು ಸಲಹೆ ನೀಡುತ್ತಿದ್ದಾರೆ.