ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಮುಂದುವರೆದಿದ್ದು, ಜನ ಹೈರಾಣಾಗಿದ್ದಾರೆ. ಈ ಮಧ್ಯೆ ಹವಾಮಾನ ಇಲಾಖೆ ಬೆಂಗಳೂರಿಗರಿಗೆ ಕೊಂಚ ನೆಮ್ಮದಿಯ ಸುದ್ದಿ ನೀಡಿದೆ.
ಬೆಂಗಳೂರಲ್ಲಿ ಕೊಂಚ ಉಷ್ಣಾಂಶ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ ಮೂರು ಡಿಗ್ರಿ ಉಷ್ಣಾಂಶ ಇಳಿಕೆ ಕಂಡಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ 34 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಸೋಮವಾರ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ಹೆಚ್‌ಎಎಲ್ ಏರ್ಪೋರ್ಟ್ ನಲ್ಲಿ 31.2 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31.6 ಡಿ. ಉಷ್ಣಾಂಶ ದಾಖಲಾಗಿದೆ. ಅಲ್ಲದೇ, ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಎರಡು ದಿನ ಮಳೆ ಮುನ್ಸೂಚನೆ ಕೂಡ ಇದೆ. ಹೀಗಾಗಿ ವಾತಾವರಣ ತಂಪಾಗಿರಲಿದೆ. ಇದನ್ನು ಕೇಳಿ ಬೆಂಗಳೂರಿಗರು ಸಂತಸ ಪಡುತ್ತಿದ್ದಾರೆ.