ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಹೀಗಾಗಿ ಮತ್ತೆ ಪ್ರಜ್ವಲ್ ಗೆ ನಿರಾಸೆ ಮೂಡಿದಂತಾಗಿದೆ. ಅಲ್ಲದೇ, ಇನ್ನಷ್ಟು ದಿನ ಕಂಬಿಯ ಹಿಂದೆಯೇ ಕಳೆಯಬೇಕಾಗಿದೆ.
ಹೈಕೋರ್ಟ್ ಗೆ ಎಸ್ ಪಿಪಿ ರವಿವರ್ಮ ಕುಮಾರ್ ಸಂತ್ರಸ್ತೆಯ ಗುರುತು ಮರೆಮಾಚಲು ಇನ್ ಕ್ಯಾಮೆರಾ ವಿಚಾರಣೆಗೆ ಮನವಿ ಮಾಡಿದ್ದರು. ಇನ್ ಕ್ಯಾಮರಾ ವಿಚಾರಣೆ ಅಂದರೆ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸುವುದಾಗಿದೆ. ಇನ್ ಕ್ಯಾಮೆರಾ ವಿಚಾರಣೆ ಕುರಿತು ಮುಖ್ಯ ನ್ಯಾಯಮೂರ್ತಿಗಳು ತೀರ್ಮಾನಿಸುತ್ತಾರೆ ಎಂದು ನ್ಯಾ. ಎಂ.ನಾಗಪ್ರಸನ್ನ ಅವರ ಹೈಕೋರ್ಟ್ ಪೀಠ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಕೋರ್ಟ್ ಸೆ. 5ಕ್ಕೆ ಮುಂದೂಡಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಮೂರು ತಿಂಗಳ ನಂತರ ಮರಳಿ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಮದಲ್ಲಿಯೇ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ಚಿತ್ರೀಕರಿಸಿದ ಆರೋಪ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.