ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳು ದಿನೇದಿನೆ ಹೆಚ್ಚಾಗುತ್ತಿದ್ದು, ವಾಹನ ಸವಾರರು ಪ್ರತಿನಿತ್ಯ ಇವುಗಳಿಂದ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಉದ್ಯಮಿಗಳೂ ಈ ಬಗ್ಗೆ ಹಲವು ಭಾರಿ ಧ್ವನಿ ಎತ್ತಿದ್ದು, ಬೆಂಗಳೂರು ತೊರೆಯುವ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಈ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ನಿಂದ ಕ್ಲಾಸ್ ತೆಗೆದುಕೊಂಡ ಪರಿಣಾಮ, ಸ್ವತಃ ಸಿಎಂ ಮತ್ತು ಡಿಸಿಎಂ ಅಖಾಡಕ್ಕಿಳಿದು ಅಧಿಕಾರಿಗಳ ಚಳಿ ಬಿಡಿಸಿದ್ದರು. ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಡೆಡ್ ಲೈನ್ ಕೂಡ ಕೊಟ್ಟಿದ್ದರು.
ಇಷ್ಟೆಲ್ಲ ಆದರೂ ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ರಾರಾಜಿಸುತ್ತಿದ್ದು, ಇದೀಗ ಮತ್ತೊಮ್ಮೆ ಈ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಬಯೋಕಾನ್ ಪಾರ್ಕ್ಗೆ ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು ಯಾಕೆ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಪ್ರಶ್ನಿಸಿದ್ದಾರೆ ಎಂದು ಕಿರಣ್ ಮಜುಂದಾರ್ ಶಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ್ದಾರೆ.