ಬೆಂಗಳೂರು: ದೇಶದಲ್ಲೇ ಅತಿಹೆಚ್ಚು ಬಾಲಾಪರಾಧಗಳು ನಡೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದ್ದು, ಚೆನ್ನೈ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಇತ್ತೀಚೆಗೆ ಭಾರತದಲ್ಲಿನ ಅಪರಾಧಗಳ ಕುರಿತಾದ ಅಂಕಿ-ಅಂಶಗಳ ಒಳಗೊಂಡ 2023ರ ವರದಿಯಲ್ಲಿ ತಿಳಿದು ಬಂದಿದೆ.
2023 ರಲ್ಲಿ ನಗರದಲ್ಲಿ 427 ಬಾಲಾಪರಾಧ ಪ್ರಕರಣಗಳು ವರದಿಯಾಗಿದ್ದವು. 2022 ರಲ್ಲಿ 200 ಮತ್ತು 2021 ರಲ್ಲಿ 177 ಪ್ರಕರಣಗಳು ದಾಖಲಾಗಿದ್ದರೆ, ಅದಾದ ನಂತರ ಏಕಾಏಕಿ ಪ್ರಕರಣಗಳ ಸಂಖ್ಯೆಯಲ್ಲಿ ಜಿಗಿತ ಕಂಡುಬಂದಿದೆ. 2023ರಲ್ಲಿ 523 ಪ್ರಕರಣಗಳನ್ನು ದಾಖಲಾಗಿದೆ.
ಎನ್ಸಿಆರ್ಬಿ ದತ್ತಾಂಶವು ಇತರ ಮಹಾನಗರಗಳಲ್ಲಿ ಬಾಲಾಪರಾಧಗಳಲ್ಲಿ ಇಳಿಕೆ ಮತ್ತು ಏರಿಕೆಯಾಗಿರುವುದನ್ನು ತೋರಿಸಿದೆ. ಹೈದರಾಬಾದ್‌ನಲ್ಲಿ 2022 ರಲ್ಲಿ 300 ಪ್ರಕರಣಗಳು ದಾಖಲಾಗಿದ್ದು, 2023 ರಲ್ಲಿ 180 ಕ್ಕೆ ಇಳಿಕೆಯಾಗಿದೆ. ಆದರೆ ಕೋಲ್ಕತ್ತಾದಲ್ಲಿ 2022 ರಲ್ಲಿ 9 ರಿಂದ 2023 ರಲ್ಲಿ 115 ಕ್ಕೆ ಏರಿಕೆಯಾಗಿದೆ.
ಬಾಲಾಪರಾಧಗಳ ಹೆಚ್ಚಳಕ್ಕೆ ಕಾರಣವೇನು?
ಮಾಧ್ಯಮಗಳಲ್ಲಿ ಅಪರಾಧದ ವೈಭವೀಕರಣ, ರೌಡಿಯಿಸಂನಿಂದ ಬೇಗನೆ ಫೇಮಸ್ ಆಗಿಬಿಡುತ್ತೇವೆ ಎಂಬ ಯುವ ಜನರ ಭ್ರಮೆಯೇ ಗಂಭೀರ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ, ಅದರಲ್ಲಿಯೂ ಬಾಲಾಪರಾದಗಳ ಹೆಚ್ಚಳಕ್ಕೆ ಕಾರಣ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂತಹ ಅನೇಕ ಪ್ರಕರಣಗಳು 10 ನೇ ತರಗತಿಯ ನಂತರ ಶಾಲೆ ಬಿಡುವುದರಿಂದ ಉಂಟಾಗುತ್ತವೆ. ಇದರಿಂದಾಗಿ ಹದಿಹರೆಯದವರು ಯಾವುದೇ ನಿರ್ದೇಶನವಿಲ್ಲದೆ ಅತಂತ್ರರಾಗುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಲಕರ ಈ ಅತಂತ್ರ ಸ್ಥಿತಿ ಅಥವಾ ದುರ್ಬಲತೆಯು ಅವರಲ್ಲಿ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತದೆ. ಇದು ಅವರ ಗೆಳೆಯರ ಗುಂಪುಗಳಲ್ಲಿ ತ್ವರಿತ ಗುರುತನ್ನು ನೀಡುತ್ತದೆ. ಇದರಿಂದ ಅವರು ಮತ್ತಷ್ಟು ಪ್ರಚೋದನೆಗೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ.
ಕೌಟುಂಬಿಕ ಅಸ್ಥಿರತೆ, ಕಡಿಮೆ ಆದಾಯದ ಹಿನ್ನೆಲೆಗಳು ಮತ್ತು ನಿರುದ್ಯೋಗ ಕೂಡ ಬಾಲಕರು, ಯುವಕರನ್ನು ಅಪರಾಧ ಕೃತ್ಯಗಳತ್ತ ಪ್ರೇರೇಪಿಸುತ್ತವೆ. ನ್ಯಾಯ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಕೂಡ ಎತ್ತಿತೋರಿಸಿದ ಪೊಲೀಸ್ ಅಧಿಕಾರಿ, ಸಣ್ಣಪುಟ್ಟ ಅಪರಾಧಗಳ ಕಾರಣಕ್ಕೆ ಬಾಲಾಪರಾಧಿಗಳನ್ನು ಬಂಧಿಸುವುದರಿಂದ ಅವರು ಮತ್ತಷ್ಟು ಹೆಚ್ಚಿನ ಅಪರಾಧ ಕೃತ್ಯಗಳನ್ನು ಎಸಗಲು ಪ್ರೇರೇಪಣೆಯಾಗುತ್ತದೆ. ಎಂದು ತಿಳಿಸಿದ್ದಾರೆ.