ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರೋಡೆ ರಾಜ್ಯಕ್ಕೆ ನಿಮ್ಮನ್ನೆಲ್ಲ ಸ್ವಾಗತ ಮಾಡುತ್ತಿದ್ದೇನೆ. ಲಾಲು ಪ್ರಸಾದ್ ಯಾದವ್(Lalu Prasad Yadav) ಅವರ ಬಿಹಾರ ರಾಜ್ಯ ಹಿಂದೆ ಆ ರೀತಿ ಕುಖ್ಯಾತಿ ಪಡೆದಿತ್ತು. ಈಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಈ ಅಪಖ್ಯಾತಿಗೆ ಒಳಗಾಗುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಕೇವಲ 5 ನಿಮಿಷಗಳಲ್ಲಿ 15 ಕೋಟಿ ರೂ. ದರೋಡೆ ಆಗಿದೆ. ಹಾಲಿವುಡ್ ಸಿನಿಮಾ ರೀತಿ ಕದ್ದು ಓಡಿ ಹೋಗಿದ್ದಾರೆ. ಸಿಎಂ ಹೋಗುತ್ತಿದ್ದಾರೆ ಎಂದು ಗೊತ್ತಿದ್ದರೂ ದರೋಡೆ ಮಾಡಿ ಓಡಿ ಹೋಗಿದ್ದಾರೆ. ಅವರಿಗೆ ಕಾನೂನಿನ ಮೇಲೆ ಎಷ್ಟು ಭಯ ಬಂದಿದೆ ಎಂಬುವುದು ಇದರಿಂದಲೇ ತಿಳಿಯುತ್ತದೆ. ಈ ಪ್ರಕರಣವನ್ನು ಸಿಎಂ ಸಮಕ್ಷಮದಲ್ಲಿ ನಡೆದ ದರೋಡೆ ಎಂದು ಹೇಳಬಹುದು. ರಾಜ್ಯದ ದರೋಡೆ ಸ್ಥಿತಿ ಗಮನಿಸಿದರೆ, ಸಿಎಂಗೆ ಅಧಿಕಾರಿಗಳು, ಸರ್ಕಾರದ ಮೇಲೆ ಎಷ್ಟು ಹಿಡಿತ ಇದೆ ಎಂಬುವುದು ಬಹಿರಂಗವಾಗುತ್ತದೆ. ನಮಗೆ ಸಿಎಂ ಮೇಲೆ ಕನಿಕರವಿದೆ. ಸಿಎಂ ಸಿದ್ದರಾಮಯ್ಯ ಪೋಲೀಸ್ ಅಧಿಕಾರಿಗಳನ್ನು ಕರೆದು ನೀವೆಲ್ಲ ಇದ್ದು, ಈ ರೀತಿ ಆಗಿದೆ ಅಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇವರೊಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಬೀದರ್ ನಲ್ಲೂ ಹಾಡಹಗಲೇ ದರೋಡೆ ನಡೆದಿದೆ. ಕರ್ನಾಟಕಕ್ಕೆ ಬಂದು ದರೋಡೆ ಮಾಡಿ ವಿಮಾನ, ರೈಲಿನಲ್ಲಿ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರಾ?ಸಿಎಂ ಇದ್ದಾರಾ? ರಾಜ್ಯದಲ್ಲಿ ದರೋಡೆಕೋರ ಜಾತ್ರೆ ನಡೆಯುತ್ತಿದೆ. ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಕೈಗಳಲ್ಲಿ ವೆಪನ್ ಇಲ್ಲ.
ದರೋಡೆಕೋರ ಬಳಿ ಹೊಸ ಗನ್, ಚಾಕು, ಲಾಂಗ್ ಎಲ್ಲ ಇವೆ. ಇದು ಪೊಲೀಸರು ತಲೆ ತಗ್ಗಿಸುವಂತಾಗುತ್ತಿದೆ. ಪೊಲೀಸರು ಬೀಟ್ ನಲ್ಲಿದ್ದರು ಯಾರನ್ನೂ ಬಂಧಿಸಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ.
ಹುಬ್ಬಳ್ಳಿ ಘಟನೆ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಲಾಯಿತು. ನಾಗಮಂಗಲ, ಚಾಮರಾಜಪೇಟೆ ಕೇಸ್ ಆಗಿದೆ. ಇಷ್ಟಾದರೂ ಪೋಲೀಸ್ ಇಲಾಖೆಯಿಂದ ಕ್ರಮ ಆಗಿಲ್ಲ. ರಾಜ್ಯದಲ್ಲಿ ದುಷ್ಟರು ಪ್ರತಿ ತಿಂಗಳೂ ಒಂದೊಂದು ಗಿಫ್ಟ್ ನೀಡುತ್ತಿದ್ದಾರೆ. ಆದರೆ, ಯಾವುದೇ ಕ್ರಮ ಆಗುತ್ತಿಲ್ಲ. ಕೇವಲ ಪೊಲೀಸರ ಟ್ರಾನ್ಸಫರ್ ಕಾರ್ಯ ಮಾತ್ರ ನಡೆಯುತ್ತಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಮುಡಾ ಹಗರಣ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದೆ. 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದ್ದಾರೆ. ಮುಡಾ ಪ್ರಕರಣ ಕೋರ್ಟ್ ನಲ್ಲಿದೆ. ಲೋಕಾಯುಕ್ತ ತನಿಖೆಗೆ ಆದೇಶಿಸಲಾಗಿದೆ. ಆದರೆ, ಲೋಕಾಯುಕ್ತರಿಗೆ ಆಸಕ್ತಿ ಇಲ್ಲದಂತಾಗಿದೆ. ಅವರಿಗೆ ಒತ್ತಡ ಇರುವುದುರಿಂದ ಅವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಆರ್. ಅಶೋಕ್, ಕಾಂಗ್ರೆಸ್ ಪಕ್ಷ ಅವರಪ್ಪನ ಮನೆ ಆಸ್ತಿ ಆಗಿದ್ದರೆ, ಅಭಿವೃದ್ಧಿಗೆ ಹಣ ಕೇಳಲ್ಲ. ನಾವೂ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ಕೋಟ್ಯಾಂತರ ಜನ ತೆರಿಗೆ ಕಟ್ಟುತ್ತಿದ್ದಾರೆ. ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದರು. ಇವರು ಎಷ್ಟು ಬಿಡುಗಡೆ ಮಾಡಿದ್ದಾರೆ. ಇವರದ್ದು ಪಾಪರ್ ಸರ್ಕಾರ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಗುಡುಗಿದ್ದಾರೆ.